‘ಮೂರೂರು ಕ್ಷೇತ್ರ ಮಹಾತ್ಮೆ’ ಪ್ರಸಂಗ ಲೋಕಾರ್ಪಣೆ

ಕುಂದಾಪುರ, ನ.28: ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್ ರಚಿಸಿದ ಕೋಣಿ ಮೂರೂರು ಮಹಾಲಿಂಗೇಶ್ವರನ ಕ್ಷೇತ್ರ ಪುರಾಣವನ್ನೊಳಗೊಂಡ ವಿನೂತನ ಪ್ರಸಂಗವನ್ನು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಪ್ರೊ.ಕಿರಣ್‌ಕೆರೆ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ಬಸವರಾಜ್ ಶೆಟ್ಟಿಗಾರ್ ಈಗಾಗಲೇ 25 ಕ್ಷೇತ್ರಗಳ ಅಧ್ಯಯನ ಮಾಡಿ 25 ಪ್ರಸಂಗವನ್ನು ರಚಿಸಿ ಯಕ್ಷರಂಗಕ್ಕೆ ನೀಡಿರುವುದು ಒಂದು ಜಾಗತಿಕ ದಾಖಲೆ. ಕೋಣಿಯಂತಹ ಕುಗ್ರಾಮದಲ್ಲಿರುವ ಮೂರೂರು ಮಹಾಲಿಂಗೇಶ್ವರನ ಪೌರಾಣಿಕ ಹಿನ್ನಲೆಯನ್ನು ಅಧ್ಯಯನ ಮಾಡಿ ಕಥೆಯನ್ನು ಬರೆದು ಪ್ರದರ್ಶನಕ್ಕೆ ನೀಡಿರುವುದರಿಂದ ಮೂರೂರಿನ ಹೆಸರು ಜಗಜ್ಜಾಹೀರು ಆಗುವಂತೆ ಮಾಡಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಮೂರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ನರಸಿಂಹ ಕಾರಂತ್ ವಹಿಸಿದ್ದರು. ಬಸವರಾಜ್ ಶೆಟ್ಟಿಗಾರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಉದ್ಯಮಿ ದಿನೇಶ್ ನೇರಂಬಳ್ಳಿ, ಪೆರ್ಡೂರು ಹಾಗೂ ಹಾಲಾಡಿ ಮೇಳದ ವ್ಯವಸ್ಥಾಪಕ ವೈ.ಕರುಣಾಕರ ಶೆಟ್ಟಿ, ಕೋಣಿ ಗ್ರಾಪಂ ಸದಸ್ಯ ಸಂಜೀವ ಪೂಜಾರಿ, ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಹೇಶ್ ಪೂಜಾರಿ ಉಪಸ್ಥಿತರಿದ್ದರು.
ಸುಬ್ಬಣ್ಣ ಕೋಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಜೇಂದ್ರ ಆಚಾರ್ ವಂದಿಸಿದರು. ಬಳಿಕ ಶ್ರೀ ಕ್ಷೇತ್ರ ಹಾಲಾಡಿ ಮೇಳ ಮತ್ತು ಅತಿಥಿ ಕಲಾವಿದರಿಂದ ಮೂರೂರು ಕ್ಷೇತ್ರ ಮಹಾತ್ಮೆ ಪ್ರಥಮ ಪ್ರದರ್ಶನ ಜರಗಿತು.







