ಕಾಪು: ಬಿಜೆಪಿಯಿಂದ ಸಂಭ್ರಮಾಚರಣೆ

ಕಾಪು, ನ.28: ಕೇಂದ್ರ ಸರಕಾರ ನೋಟು ನಿಷೇಧಿಸಿರುವುದನ್ನು ಬೆಂಬಲಿಸಿ ಬಿಜೆಪಿ ಕರೆ ನೀಡಿದ ಸಂಭ್ರಮಾಚರಣೆಯನ್ನುಕಾಪು ಕ್ಷೇತ್ರ ಬಿಜೆಪಿ ಕಾಪು ಪೇಟೆಯಲ್ಲಿ ಸೋಮವಾರ ಆಚರಿಸಿದರು.
ಸಂಭ್ರಮಾಚರಣೆ ಕಾರ್ಯಕ್ರಮದ ಪ್ರಯುಕ್ತ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಲಾಲಾಜಿ ಮೆಂಡನ್, ಕಪ್ಪುಹಣದ ಕುಳಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಮತ್ತು ಕಪ್ಪುಹಣದ ಮೂಲ ಬೇರುಗಳನ್ನೇ ನಾಶ ಮಾಡುವ ಪ್ರಯತ್ನದಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಉತ್ತಮ ಯೋಜನೆಯನ್ನು ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ ಎಲ್ಲೆಡೆ ವಿಫಲವಾಗಿದೆ. ಮೋದೀಜಿಯವರ ನಿರ್ಧಾರದ ವಿರುದ್ಧ ನಡೆಯಲಿದ್ದ ಆಕ್ರೋಶ್ ದಿವಸದ ಬದಲು ಸಂಭ್ರಮದ ದಿನಕ್ಕೆ ಎಲ್ಲರಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ದೊರಕುತ್ತಿದ್ದು, ಇದು ಮೋದಿಯವರ ಬಗ್ಗೆ ಜನ ಹೊಂದಿರುವ ಭಾವನೆಯನ್ನು ಎತ್ತಿ ತೋರಿಸುತ್ತದೆ ಎಂದು ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಪುರಸಭೆಯ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು ಮತ್ತಿತರರು ಉಪಸ್ಥಿತರಿದ್ದರು.
ಸಂಭ್ರ್ರಮಾಚರಣೆಯ ಪ್ರಯುಕ್ತ ಕಾಪು ಪೇಟೆಯಲ್ಲಿ ವಿಜಯದ ನಡಿಗೆ ಸಂಭ್ರಮಾಚರಣೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಮತ್ತು ವಿವಿಧ ಬ್ಯಾಂಕ್‌ಗಳಿಗೆ ತೆರಳಿ ಅವರ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತ ಪಡಿಸಿ ಸಿಹಿ ಹಂಚಿದರು.







