ಕತರ್: ಕೆಸಿಎಫ್‌ನಿಂದ ‘ಟ್ರೆಷರಿ ಆಫ್ ಸಕ್ಸಸ್’ ಸೆಮಿನಾರ್

ದೋಹಾ, ನ.28: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಹುತೇಕ ಯುವಕರು ನಿರ್ದಿಷ್ಟ ಗುರಿ, ಉದ್ದೇಶವಿಲ್ಲದೇ ಭವಿಷ್ಯದ ಕಡೆಗೆ ಚಿಂತಿಸುತ್ತಿರುವುದು, ಉತ್ತಮ ಜೀವನ ಕೌಶಲ್ಯಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳಲು ಸಾಧ್ಯವಾಗದೆ, ಜೀವನದಲ್ಲಿ ವಿಫಲರಾಗುವುದು ಮತ್ತು ದುಶ್ಚಟಗಳಿಗೆ ಬಲಿಯಾಗುವುದು ಸಾಧಾರಣವಾಗಿ ಕಂಡು ಬರುತ್ತಿದೆ. ಇಂತಹ ಸನ್ನಿವೇಶಗಳಲ್ಲಿ ಅವರಿಗೆ ತನ್ನೊಳಗೆ ಅಡಗಿರುವ ಸಾಮರ್ಥ್ಯಗಳನ್ನು ಹೊರಗೆಡಹುವಂತೆ ಮಾಡಿ, ಅವುಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸುವಂತೆ ಉತ್ತಮ ಪರಿಸರವೊಂದನ್ನು ಸೃಷ್ಟಿಮಾಡಿ, ತಮ್ಮ ಮುಂದಿರುವ ಅವಕಾಶಗಳನ್ನು ಉಪಯೋಗಿಸಿಕೊಂಡಾಗ, ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಸಾಧ್ಯವಾಗುತ್ತದೆ ಎಂದು ಕೆಸಿಎಫ್ ಇಂಟರ್‌ನ್ಯಾಷನಲ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಶೇಖ್ ಬಾವ ಮಂಗಳೂರು ಹೇಳಿದರು.
ಅವರು ಕರ್ನಾಟಕ ಕಲ್ಚರಲ್ ಫೌಂಡೇಶನ್ ಕತರ್ ರಾಷ್ಟ್ರೀಯ ಸಮಿತಿಯು ದೊಹಾದಲ್ಲಿ ಆಯೋಜಿಸಿದ ’ಟ್ರೆಷರಿ ಆಫ್ ಸಕ್ಸೆಸ್ಸ್’ ಎಂಬ ವಿಷಯದಲ್ಲಿ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ನಿರ್ದಿಷ್ಟ ಗುರಿ ಹಾಗೂ ಉದ್ದೇಶದಿಂದ ಕಾರ್ಯೋನ್ಮುಖರದಾಗ ಯಶಸ್ಸು ಖಚಿತವೆಂದು ತಿಳಿಸಿದರು. ವೈಫಲ್ಯಗಳ ಬಗೆಗಿನ ಆತಂಕ ಮತ್ತು ಅಪನಂಬಿಕೆಗಳು ಯಶಸ್ಸಿನ ಬದ್ಧ ವೈರಿಯಾಗಿದ್ದು ಸೃಜನಾಶೀಲತೆ, ಸೂಕ್ಷ್ಮ ಸಂವೇದನೆ ಹಾಗೂ ಕಾರ್ಯತತ್ಪರತೆ ಪ್ರಸ್ತುತ ಜಗತ್ತಿನಲ್ಲಿ ಬೇಡಿಕೆಯಿರುವ ಪ್ರಮುಖ ಕೌಶಲ್ಯಗಳು ಎಂದು ತಿಳಿಸಿದರು.
ಸಯ್ಯದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ದುಆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಸಿಎಫ್ ಕತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಫಿಝ್ ಉಮರುಲ್ ಫಾರೂಕ್ ಸಖಾಫಿ ವಹಿಸಿದ್ದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖತರ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಮ್ ಸಅದಿ ಮಾತನಾಡಿ, ಇಂತಹ ಸೆಮಿನಾರ್‌ಗಳನ್ನು ಆಯೋಜಿಸುವಲ್ಲಿ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಫಾರೂಕ್ ಕೃಷ್ಣಾಪುರ ಸ್ವಾಗತಿಸಿ, ಮಿರ್ಷಾದ್ ಕನ್ಯಾನ ವಂದಿಸಿದರು. ಅಬ್ದುಲ್ ಖಾದರ್ ಸಾಗರ ಕಾರ್ಯಕ್ರಮವನ್ನು ನಿರೂಪಿಸಿದರು.







