ಬಿಜೆಪಿಯ ಏಕತಾ ಸಮಾವೇಶಕ್ಕೆ ಕಪ್ಪು ಹಣ ಬಳಕೆ
ಜನಾರ್ದನ ಪೂಜಾರಿ ಗಂಭೀರ ಆರೋಪ
.gif)
ಮಂಗಳೂರು, ನ.29: ಬೆಂಗಳೂರಿನ ಅರಮನೆ ಮೈದಾನದಲ್ಲಿ ರವಿವಾರ ಬಿಜೆಪಿ ಆಯೋಜಿಸಿದ್ದ ಹಿಂದುಳಿದ ಸಮುದಾಯಗಳ ಏಕತಾ ಸಮಾವೇಶಕ್ಕೆ ಕಪ್ಪುಹಣ ಬಳಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸೋಮವಾರ ಕೇಂದ್ರ ಸರಕಾರದ ವಿರುದ್ಧ ವಿಪಕ್ಷಗಳು ನಡೆಸಿದ ಆಕ್ರೋಶ್ ದಿವಸ್‌ಗೆ ಹಣ ಕೊಟ್ಟು ಜನರನ್ನು ಕರೆಸಲಾಗಿದೆ ಎಂಬ ಆರೋಪದ ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪೂಜಾರಿ ಈ ರೀತಿ ಪ್ರತಿಕ್ರಿಯಿಸಿದರು. ಎಲ್ಲ ರಾಜಕೀಯ ಪಕ್ಷಗಳ ಹಣಬರೆಹ ಇಷ್ಟೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾಗವಹಿಸಿದ್ದ ರವಿವಾರ ಬೆಂಗಳೂರಿನಲ್ಲಿ ನಡೆದ ಏಕತಾ ಸಮಾವೇಶಕ್ಕೂ ಹಣ ಕೊಟ್ಟೇ ಜನರನ್ನು ಕರೆಸಲಾಗಿದೆ. ಈ ಕಾರ್ಯಕ್ರಮಕ್ಕೆ ಕಪ್ಪು ಹಣ ಬಳಸಲಾಗಿದೆ. ಕಪ್ಪು ಹಣ ಬಳಸಿಲ್ಲ ಅನ್ನೋದಾದರೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಹೇಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಿಗೆ ಸವಾಲು ಹಾಕಿದರು.
ಆಕ್ರೋಶ್ ದಿವಸ್ ಬೆಂಬಲಿಸದ ಸಿಎಂ:
500, 1000 ನೋಟು ನಿಷೇಧ ವಿಚಾರದಲ್ಲಿ ಜನರು ಬೀದಿಗೆ ಬಿದ್ದಿದ್ದಾರೆ. ನೋಟು ಅಮಾನ್ಯ ಸಮಸ್ಯೆಯ ವಿರುದ್ಧ ನಿನ್ನೆ ನಡೆದ ಆಕ್ರೋಶ್ ದಿವಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ಸೂಚಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪೂಜಾರಿ, ಜನರ ಕ್ರಮ ಕೈಗೊಂಡರೆ ಮುಖ್ಯಮಂತ್ರಿ ಮನೆಗೆ ಹೋಗಬೇಕಾಗಬಹುದು ಎಂದು ಎಚ್ಚರಿಸಿದರು.







