ಸಾಮಾಜಿಕ ಕಾರ್ಯಕರ್ತ ಖುರ್ರಮ್ ಗೆ ಕೋರ್ಟ್ ಆದೇಶಿಸಿದರೂ ಬಿಡುಗಡೆ ಇಲ್ಲ !

ಸಾಮಾಜಿಕ ಕಾರ್ಯಕರ್ತ ಖುರ್ರಮ್ ಗೆ ಕೋರ್ಟ್ ಆದೇಶಿಸಿದರೂ ಬಿಡುಗಡೆ ಇಲ್ಲ !
ಹೊಸದಿಲ್ಲಿ, ನ.29: ಕಾಶ್ಮೀರದ ಮಾನವ ಹಕ್ಕು ಕಾರ್ಯಕರ್ತ ಖುರ್ರಮ್ ಪರ್ವೇಝ್ ಅವರ ಬಂಧನ ‘ಅಕ್ರಮ’ ಹಾಗೂ ‘ಅಧಿಕಾರದ ದುರುಪಯೋಗ’ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಶುಕ್ರವಾರ ಹೇಳಿ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದ್ದರೂ, ಖುರ್ರಮ್ ಅವರನ್ನು ಇನ್ನೂ ಬಿಡುಗಡೆಗೊಳಿಸಲಾಗಿಲ್ಲ. ಅದಕ್ಕೆ ಕಾರಣ- ಕೋರ್ಟ್ ಆದೇಶದಲ್ಲಿರುವ ಒಂದು ಸಣ್ಣ ತಪ್ಪು. ಅವರ ವಿರುದ್ಧ ಪಿಎಸ್ ಎ ವಾರಂಟ್ ಹೊರಡಿಸಿದ ದಿನಾಂಕವನ್ನು ಕೋರ್ಟ್ ಆದೇಶ ಪ್ರತಿಯ ಒಂದು ಕಡೆ ತಪ್ಪಾಗಿ ಉಲ್ಲೇಖಿಸಲಾಗಿರುವುದೇ ಈ ಸಮಸ್ಯೆಗೆ ಕಾರಣ.
‘‘ಕೋರ್ಟ್ ಆದೇಶ ಪ್ರತಿಯಲ್ಲಿ ಒಂದು ಸಣ್ಣ ತಪ್ಪು ಇತ್ತು. ಅದನ್ನು ಸರಿಪಡಿಸಿದ ಕೂಡಲೇ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದು ಕೋಟ್ಬಲ್ವಾಲ್ ಜೈಲಿನ ಸುಪರಿಂಟೆಂಡೆಂಟ್ ದಿನೇಶ್ ಶರ್ಮ ಹೇಳಿದ್ದಾರೆ. ಮೂಲಗಳ ಪ್ರಕಾರ ಸೆಪ್ಟೆಂಬರ್ 21 ಎಂದು ಟೈಪ್ ಮಾಡುವಲ್ಲಿ ಸೆಪ್ಟೆಂಬರ್ 19 ಆಗಿರುವುದೇ ಖುರ್ರಂ ಬಿಡುಗಡೆಯಾಗದಿರಲು ಕಾರಣ.
ಆದರೆ ಹೈಕೋರ್ಟ್ ಅವರನ್ನು ಬಿಡುಗಡೆಗೊಳಿಸುವ ಆದೇಶ ಮಾತ್ರ ನೀಡಿದೆಯಲ್ಲದೆ ಅವರನ್ನು ಬಂಧಿಸಿದ ಕ್ರಮವನ್ನೂ ಪ್ರಶ್ನಿಸಿದೆ ಎಂದು ಖುರ್ರಂ ಅವರ ಸಂಬಂಧಿಯೊಬ್ಬರು ಹೇಳಿದ್ದಾರೆ. ಅವರ ಕುಟುಂಬ ಅವರ ಬಿಡುಗಡೆಗಾಗಿ ಶುಕ್ರವಾರದಿಂದ ಕಾಯುತ್ತಿದೆ.
ಸಣ್ಣ ವಿಷಯವೊಂದರ ಕಾರಣಕ್ಕಾಗಿ ಅವರ ಬಿಡುಗಡೆಯನ್ನು ವಿಳಂಬಿಸಲಾಗುತ್ತಿದೆ. ಈ ಪ್ರಮಾದವನ್ನು ಗಂಭೀರವಾಗಿ ಪರಿಗಣಿಸದೆ ಖುರ್ರಂ ಅವರನ್ನು ಬಿಡುಗಡೆಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ಗೃಹ ಇಲಾಖೆ ಆದೇಶಿಸಬೇಕೆಂದು ಸ್ವತಹ ಅಧಿಕಾರಿಗಳೇ ಹೇಳುತ್ತಾರೆ.
‘‘ಈಗ ನಾವು ಮತ್ತೆ ನ್ಯಾಯಾಲಯದ ಮೊರೆ ಹೋಗಿ ಆಗಿರುವ ತಪ್ಪನ್ನು ತಿದ್ದಿ ಹೊಸ ಆದೇಶ ನೀಡುವಂತೆ ಕೋರಬೇಕಾಗುತ್ತದೆ’’ ಎಂದು ಜೈಲಿನ ಅಧಿಕಾರಿಗಳು ಹೇಳುತ್ತಾರೆ.
ದಿಲ್ಲಿಯಿಂದ ಜಿನೀವಾಗೆ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲು ಖುರ್ರಂ ಅವರು ಪಯಣಿಸದಂತೆ ತಡೆಯಲಾಗಿತ್ತಲ್ಲದೆ, ಮರುದಿನ ಅಂದರೆ ಸೆಪ್ಟೆಂಬರ್ 16ರಂದು ಅವರನ್ನು ಶ್ರೀನಗರದಲ್ಲಿರುವ ಅವರ ಮನೆಯಿಂದ ಬಂಧಿಸಲಾಗಿತ್ತು.





