ನ.30ರಂದು 2 ಸಾವಿರ ಮೊಗವೀರ ಕುಟುಂಬಗಳಿಗೆ ಉಚಿತ ಆರೋಗ್ಯ ಕಾರ್ಡ್ ವಿತರಣೆ
ಮುಲ್ಕಿ, ನ.29: ದ.ಕ. ಮೊಗವೀರ ಯುವ ವೇದಿಕೆ, ಡಾ.ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಉಡುಪಿ, ಅವಿಜಿತ ದ.ಕ. ಮೊಗವೀರ ಸಂಘಟನೆ ಹಾಗೂ ಕೆಎಂಸಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಸುಮಾರು 2 ಸಾವಿರ ಮೊಗವೀರ ಕುಟುಂಬಗಳಿಗೆ ಉಚಿತ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ನ.30 ರಂದು ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ನಡೆಯಲಿದೆ.
ಬೈಕಂಪಾಡಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಮಾಹಿತಿ ನೀಡಿದ ದ.ಕ. ಮೊಗವೀರ ಯುವ ವೇದಿಕೆಯ ಅಧ್ಯಕ್ಷ ಲೀಲಾಧರ, ಐವರು ಸದಸ್ಯರಿರುವ ಕುಟುಂಬಕ್ಕೆ ಒಂದು ಆರೋಗ್ಯ ಕಾರ್ಡ್ ನೀಡಲಾಗುವುದು. ಮತ್ತು ಅದಕ್ಕಿಂತ ಹೆಚ್ಚಿನ ಸದಸ್ಯರಿದ್ದವರಿಗೆ ಪ್ರತ್ಯೇಕ ಆರೋಗ್ಯ ಕಾರ್ಡ್‌ಗಳನ್ನು ನೀಡಲಾಗುವುದು ಎಂದರು.
ಈ ಕಾರ್ಡ್ ಪಡೆದವರು ಕೆ.ಎಂ.ಸಿ ಮಂಗಳೂರಿನ ಅತ್ತಾವರ ಮತ್ತು ಉಡುಪಿಯ ಆಸ್ಪತ್ರೆಗಳಲ್ಲಿ ಶೇ.20 ರಿಯಾಯಿತಿ ದರದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಬಹುದು. ಹೆರಿಗೆ ಸಮಯದಲ್ಲಿ ಈ ಕಾರ್ಡನ್ನು ಬಳಸಬಹುದು. ಜನರಲ್ ವಾರ್ಡ್‌ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಅಪಘಾತ ಸಂದರ್ಭಗಳಲ್ಲಿ ಒಂದು ಲಕ್ಷ ರೂ. ವರೆಗಿನ ವಿಮೆಯನ್ನೂ ಫಲಾನುಭವಿಗಳು ಪಡೆದುಕೊಳ್ಳಬಹುದು ಎಂದವರು ವಿವರಿಸಿದರು.
ನ.30ರಂದು ಮಂಗಳೂರಿ ಟಿಎಂಎ ಪೈ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಣಿಪಾಲ ವಿದ್ಯಾ ಸಂಸ್ಥೆಯ ಸಹಕುಲಧಿಪತಿ ಡಾ,ಎಚ್.ಎಸ್.ಬಳ್ಳಾಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ.ಜಿ. ಶಂಕರ್ ಉಚಿತ ಸುರಕ್ಷಾ ಕಾರ್ಡ್‌ಗಳನ್ನು ವಿರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷೆಯನ್ನು ದ.ಕ. ಮೊಗವೀರ ಸಭಾದ ಅಧ್ಯಕ್ಷ ಗಂಗಾಧರ ಕರ್ಕೇರ ವಹಿಸಲಿದ್ದಾರೆ.
ಕೆ.ಎಂ.ಸಿ ಡೀನ್ ಡಾ.ವೆಂಕಟ್ರಾಯ ಭಟ್, ಅತ್ತಾವರ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಆನಂದ್ ವೇಣುಗೋಪಾಲ್, ದ.ಕ. ಉಡುಪಿ ಮೀನು ಮಾರಟಗಾರರ ಸಂಘದ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ, ದ.ಕ.ಜಿಲ್ಲಾ ಮೊಗವೀರ ಯುವ ವೇದಿಕೆ ಅಧ್ಯಕ್ಷ ಲೀಲಾಧರ ತಣ್ಣೀರುಬಾವಿ, ಉಡುಪಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಭರತ್ ಕುಮಾರ್, ಮತ್ಸೋದ್ಯಮಿ ಶರತ್ ಎಲ್. ಕರ್ಕೇರ ಮೊದಲಾದವರು ಉಪಸ್ಥಿತರಿರುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಮೊಗವೀರ ಯುವ ವೇದಿಕೆಯ ಪ್ರಧಾನ ಕರ್ಯದರ್ಶಿ ಸಂಜಯ ಬೆಂಗ್ರೆ, ಜಗದೀಶ ಬೊಕ್ಕಪಟ್ನ, ಕುಮಾರ್ ಮೆಂಡನ್, ದೇವದಾಸ ಕುಳಾಯಿ, ರೋಹಿದಾಸ್ ಕೂಳೂರು, ರವಿ ಶ್ರೀಯಾನ್, ನವೀನ್ ಕೋಟ್ಯಾನ್ ಬೈಕಂಪಾಡಿ, ತುಷಾರ್ ಕರ್ಕೇರ ಉಪಸ್ಥಿತರಿದ್ದರು.







