ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಈ ಮಹಿಳೆ ಈಗ ಭಾರೀ ಫೇಮಸ್ಸು !
ಕಾರಣ ಏನು ಗೊತ್ತೇ ?

ಜೀವನದಲ್ಲಿ ಉತ್ತಮ ಕೆಲಸಕ್ಕೆ ಮುಂದಾಗುವುದು ಸರಳವೇನೂ ಅಲ್ಲ. ಆದರೆ ಈ ಯುವತಿ ಆ ಕೆಲಸ ಮಾಡಿ ಈಗ ಫೇಸ್‌ಬುಕ್ ನಾಯಕಿಯಾಗಿದ್ದಾಳೆ. ನವೆಂಬರ್ 24ರಂದು ಮುಂಬೈ ಮೂಲದ ಹಿಮಾನಿ ಜೈನ್ ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್ ಒಂದು ಈಗ 39,000 ಪ್ರತಿಕ್ರಿಯೆ ಸಿಕ್ಕಿರುವುದಲ್ಲದೆ 6,200 ಶೇರ್‌ಗಳು ಆಗಿವೆ. ಹಾಗಿದ್ದರೆ ಆ ಪೋಸ್ಟ್‌ನಲ್ಲಿ ಏನಿತ್ತು?
ಹಿಮಾನಿ ನವೆಂಬರ್ 23ರಂದು ಕಚೇರಿಯಿಂದ ಹೋಗಲು ಶೇರಿಂಗ್ ಆಟೋವನ್ನು ಹಿಡಿದಿದ್ದಳು. ಶಾಹಿದ್ ಎನ್ನುವ ಅಟೋ ಚಾಲಕ ಆಕೆಯನ್ನು ಕಚೇರಿಯಿಂದ ಪಿಕ್ ಮಾಡಿದ್ದರು. ನಂತರ ಸ್ವಲ್ಪ ದೂರದಲ್ಲಿ ಗಾಯತ್ರಿ ಎನ್ನುವ ಮಹಿಳೆ ಆಟೋ ಹತ್ತಿದ್ದರು. ಚಾಲಕ ಸಹೃದಯಿಯಾಗಿದ್ದು ಉತ್ತಮ ನಡತೆ ಹೊಂದಿದ್ದ. ಆದರೆ ಸುಮಾರು 30ರ ಆಸುಪಾಸಿನಲ್ಲಿದ್ದ ಗಾಯತ್ರಿ ಕ್ಯಾಬ್ ಹತ್ತಿದ ಕೂಡಲೇ ಡ್ರಾಪ್ ಬಗ್ಗೆ ಶಾಹಿದ್ ಜೊತೆಗೆ ಜಗಳಕ್ಕೆ ಇಳಿದಿದ್ದಳು. ಚಾಲಕ ತಾನು ಆಪ್‌ನಲ್ಲಿರುವ ದಾರಿ ಮತ್ತು ವಿಳಾಸಕ್ಕೇ ಹೋಗಬೇಕು ವಿನಾ ದಾರಿ ಬದಲಿಸುವಂತಿಲ್ಲ ಎಂದು ಹೇಳಿದ್ದ. ಆದರೆ ಮಹಿಳೆ ಒಪ್ಪಿಕೊಳ್ಳದೆ ಆತನ ಮೇಲೆ ಕೇಸು ದಾಖಲಿಸುವುದಾಗಿ ಹೇಳಿದ್ದಳು. ಚಾಲಕ ಮತ್ತು ಹಿಮಾನಿ ಇಬ್ಬರೂ ಗಾಯತ್ರಿಯನ್ನು ಒಪ್ಪಿಸಲು ಪ್ರಯತ್ನಿಸಿದರೂ ಆಕೆ ಒಪ್ಪಲಿಲ್ಲ. "ಆ ಹೊತ್ತಿಗೆ ಆಕೆ ಸಂಪೂರ್ಣ ಸಹನೆ ಕಳೆದುಕೊಂಡು ಅಟೋವನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಶಾಹಿದ್‌ಗೆ ಹೇಳಿದ್ದರು. ನನ್ನನ್ನೂ ಜೊತೆಗೆ ಬಂದು ದೂರು ಕೊಡುವಂತೆ ಹೇಳಿದರು. ಆದರೆ ನಾನು ಒಪ್ಪದಾಗ ನನಗೂ ಬೈಗಳನ್ನು ಕೊಟ್ಟಿದ್ದರು. ಶಾಹಿದ್ ನನ್ನನ್ನು ಅಲ್ಲೇ ಇಳಿಯಲು ಹೇಳಿ ಮತ್ತೊಂದು ಆಟೋ ಹಿಡಿದು ಹೋಗುವಂತೆ ಸೂಚಿಸಿ ಆಗಿರುವ ಅಹಿತಕರ ಸ್ಥಿತಿಗೆ ಕ್ಷಮೆಯಾಚಿಸಿದ್ದ" ಎಂದು ಆಕೆ ಬರೆದುಕೊಂಡಿದ್ದಾರೆ.
ಆ ಸಂದರ್ಭದಲ್ಲಿ ಚಾಲಕ ಮತ್ತು ಮಹಿಳೆ ಪೊಲೀಸರನ್ನು ಕರೆದು ಜನಸಂದಣಿ ಸೇರಿ ನಾಟಕ ದೊಡ್ಡದಾಗಿತ್ತು. ಹಿಮಾನಿ ಮನೆಗೆ ಹೋಗುವವಳಿದ್ದಳು. ಆದರೆ ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರು ಆಕೆಗೆ ಪೊಲೀಸ್ ಠಾಣೆಗೆ ಹೋಗಿ ಸಾಕ್ಷಿ ನುಡಿಯುವಂತೆ ಹೇಳಿದರು. "ಮೇಡಂ, ಪೊಲೀಸ್ ಠಾಣೆಗೆ ಹೋಗಿ. ಇಲ್ಲದಿದ್ದರೆ ಚಾಲಕನನ್ನು ಹೊಡೆದು ಹಾಕುತ್ತಾರೆ. ಮಹಿಳೆಯರ ಕೇಸು ಎಂದರೆ ಈತನ ಮಾತನ್ನು ಯಾರೂ ಕೇಳುವುದಿಲ್ಲ. ಕೊಲೆಯೇ ಮಾಡಿಬಿಡುತ್ತಾರೆ. ಮಹಿಳೆಯ ಜೊತೆಗೆ ಪ್ರಕರಣವಾದ ಕಾರಣ ಆತನ ಮಾತನ್ನು ಯಾರೂ ಕೇಳಲಾರರು" ಎಂದು ಆಕೆ ಸಲಹೆ ನೀಡಿದ್ದರು. ಈಗಾಗಲೇ ತಡವಾಗಿದ್ದ ಹಿಮಾನಿಗೆ ಪೊಲೀಸ್ ಠಾಣೆಗೆ ಹೋಗುವುದು ಬೇಕಿರಲಿಲ್ಲ. ಆದರೆ ಚಾಲಕ ಸುಮ್ಮನೆ ಶಿಕ್ಷೆ ಅನುಭವಿಸುವುದು ಬೇಡ ಎಂದು ನಿರ್ಧರಿಸಿ ಪೊವೈ ಪೊಲೀಸ್ ಠಾಣೆಗೆ ಆತನ ಜೊತೆಗೆ ಹೋಗಿದ್ದರು.
ಈ ಕತೆಯಲ್ಲಿ ಅಂತಿಮವಾಗಿ ಮೋಜಿನ ತಿರುವು ಕೂಡ ಬಂದಿತ್ತು. ಹಿಮಾನಿ ಪೊಲೀಸ್ ಠಾಣೆಗೆ ಹೋಗಿ ಚಾಲಕನ ಪರವಾಗಿ ಸಾಕ್ಷಿ ನುಡಿದಿದ್ದರು. ಆದರೆ ಗಾಯತ್ರಿ ಮಾತ್ರ ಚಾಲಕ ತನ್ನ ಕಾಲಿಗೆ ಬಿದ್ದು ಕ್ಷಮೆಯಾಚಿಸಬೇಕು ಎಂದು ಒತ್ತಡ ಹೇರಿದ್ದರು. ಅಂತಿಮವಾಗಿ ಚಾಲಕನ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಆಶ್ವಾಸನೆ ನೀಡಿದ ನಂತರ ಆಕೆ ಮನೆಗೆ ಹೋಗಿದ್ದರು. ಈ ನಡುವೆ ಪೊಲೀಸರು ಚಾಲಕನನ್ನು ಒಳಗೆ ಕರೆದುಕೊಂಡು ಹೋಗಿ ಹೊಡೆದಂತೆ ನಾಟಕವಾಡಿದ್ದರು. ಒಳಗಿನಿಂದ ಪೆಟ್ಟು ಬೀಳುವುದು ಮತ್ತು ನೋವಿನ ಶಬ್ದ ಕೇಳಿದಾಗ ಹಿಮಾನಿ ಓಡಿ ಒಳಗೆ ಹೋಗಿ ನೋಡಿದ್ದರು. ಆದರೆ ಪೊಲೀಸರು ಸುಮ್ಮನೆ ನೆಲಕ್ಕೆ ಬೆಲ್ಟಿನಿಂದ ಬಡಿದು ಹೊಡೆದಂತೆ ನಾಟಕವಾಡಿದ್ದರು ಮತ್ತು ಚಾಲಕ ನೋವಿನಿಂದ ಕಿರುಚಿದಂತೆ ಮಾಡಿದ್ದ. ಗಾಯತ್ರಿಯ ಮನಸ್ಸಿನ ಸಮಾಧಾನಕ್ಕಾಗಿ ಪೊಲೀಸರು ಈ ನಾಟಕವಾಡಿದ್ದರು. ಆದರೆ ಹಿಮಾನಿ ಸಾಕ್ಷಿ ನುಡಿಯದೆ ಇದ್ದಿದ್ದಲ್ಲಿ ನಿಜವಾಗಿಯೂ ಪ್ರಕರಣ ಗಂಭೀರವಾಗಿರುತ್ತಿತ್ತು. ಪೊಲೀಸರ ಸಾಂಧರ್ಬಿಕ ಅರಿವು ಮತ್ತು ನಡೆಯನ್ನು ಹಿಮಾನಿ ತಮ್ಮ ಪೋಸ್ಟ್‌ನಲ್ಲಿ ಹೊಗಳಿದ್ದಾರೆ. ಈ ವಿವರವನ್ನು ಫೇಸ್‌ಬುಕ್‌ನಲ್ಲಿ ಹಾಕಿದ ಮೇಲೆ ಎಲ್ಲೆಡೆಯಿಂದ ಅವರಿಗೆ ಪ್ರಶಂಸೆಯ ಸುರಿಮಳೆ ಬರುತ್ತಿದೆ. "ನಾನು ಇದನ್ನು ನಿರೀಕ್ಷಿಸಿದ್ದೆ. ಆದರೆ ಇದು ವೈರಲ್ ಆಗಿರುವ ಕಾರಣ ಇತರರಿಗೂ ಪ್ರೇರಣೆಯಾಗಲಿದೆ ಎಂದುಕೊಂಡಿರುವೆ" ಎಂದು ಹಿಮಾನಿ ಮಾಧ್ಯಮಗಳ ಬಳಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಕ್ಯಾಬ್ ಸಂಸ್ಥೆ ಈ ಪ್ರಕರಣದ ಬಗ್ಗೆ ವಿಚಾರಿಸುವುದಾಗಿ ಹೇಳಿದೆ. "ನಾನು ಕ್ಯಾಬ್ ಸಂಸ್ಥೆಗೆ ಕೇಳಿಕೊಂಡಾಗ ಅವರು ವಿಷಯದತ್ತ ಗಮನಹರಿಸುವುದಾಗಿ ಹೇಳಿದ್ದಾರೆ. ಯಾವುದೇ ಕ್ರಮ ಕೈಗೊಳ್ಳುವ ಮೊದಲು ಗ್ರಾಹಕರ ಹಿನ್ನೆಲೆ ಗಮನಿಸುವುದಾಗಿ ಭರವಸೆ ನೀಡಿದ್ದಾರೆ" ಎಂದು ಹಿಮಾನಿ ಹೇಳಿದ್ದಾರೆ.
ಕೃಪೆ: www.ndtv.com







