ಬೆಳ್ತಂಗಡಿ : ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಬೆಳ್ತಂಗಡಿ,ನ.29: ಕರ್ನಾಟಕ ಸಿರೋ ಮಲಬಾರ್ ಕಧೋಲಿಕ್ ಅಸೋಸಿಯೇಶನ್ ಧರ್ಮಸ್ಥಳ, ವಿನ್ಸೆಂಟ್ ಡಿ ಪೌಲ್ ಸೊಸೈಟಿ, ಧರ್ಮಸ್ಥಳ ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜು ಸಮಾಜಕಾರ್ಯ ವಿಭಾಗ ಉಜಿರೆ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ಸಮುದಾಯ ಆರೋಗ್ಯ ವಿಭಾಗ ತುಂಬೆ ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನ. 27 ರಂದು ಸೈಂಟ್ ಜೋಸೆಫ್ ಚರ್ಚ್ ಧರ್ಮಸ್ಥಳದಲ್ಲಿ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಧರ್ಮಸ್ಥಳ ಚರ್ಚ್‌ನ ಧರ್ಮಗುರುಗಳಾದ ಫಾ. ಜೋರ್ಜ್ ಮುಟ್ಟತ್‌ಪಾಡತ್ ಅವರು ನೆರವೇರಿಸಿ ಮಾತನಾಡಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವುದು ಇಂದಿನ ಅಗತ್ಯವಾಗಿದೆ, ಹಲವಾರು ರೋಗಗಳು ಗ್ರಾಮೀಣ ಜನರನ್ನು ಕಾಡುತ್ತಿದ್ದು ಸೂಕ್ತ ಮಾರ್ಗದರ್ಶನ ಸಿಗದೆ ಕಷ್ಟ ಅನುಭವಿಸುತ್ತಿದ್ದಾರೆ ಇಂತಹ ಆರೋಗ್ಯ ಶಿಬಿರಗಳ ಮೂಲಕ ತಮ್ಮ ರೋಗಗಳ ಬಗ್ಗೆ ತಿಳಿದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಎಂ.ಸಿ.ಎ ತಾಲೂಕು ಅಧ್ಯಕ್ಷ ಹಾಗೂ ತಾಲೂಕು ಪಂಚಾಯತು ಸದಸ್ಯ ವಿ.ಟಿ. ಸೆಬಾಸ್ಟಿನ್ ಅವರು ವಹಿಸಿ ಗ್ರಾಮೀಣ ಪ್ರದೇಶದ ಜನರಿಗೆ ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ಹೆಚ್ಚು ಪ್ರಯೋಜನಕಾರಿಯಾಗಿದೆ. ಸಂಘಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳು್ಳವ ಕಾರ್ಯ ಮಾಡಬೇಕು ಎಂದರು.
ಮುಖ್ಯ ಅತಿಧಿಗಳಾಗಿ ಆಗಮಿಸಿದ್ದ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಡಾ. ಸುಧೀರ್ ಅವರು ಆರೋಗ್ಯ ಶಿಬಿರದ ಬಗ್ಗೆ ಮಾಹಿತಿ ನೀಡಿ ರೋಗಗಳನ್ನು ಆರಂಬದಲ್ಲಿಯೇ ಗುರುತಿಸಿದಾಗ ಅದಕ್ಕೆ ಸುಲಭವಾಗಿ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ. ರೋಗ ಬರದಂತೆ ಎಚ್ಚರಿಕೆಯನ್ನು ವಹಿಸುವುದರೊಂದಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ವೇದಿಕೆಯಲ್ಲಿ ಎಸ.ಡಿ.ಎಂ ಕಾಲೇಜಿನ ಸಮಾ ಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಕೆ, ಧರ್ಮಸ್ಥಳ ಗ್ರಾಮ ಪಂಚಾಯತು ಸದಸ್ಯೆ ರೀನಾ, ಡಾ. ಸೌರಭ್, ಚರ್ಚ್ ಆಡಳಿತ ಮಂಡಳಿ ಸದಸ್ಯ ಪೌಲಫಸ್ ಎಂ.ಪಿ ಹಾಗೂ ಇತರರು ಉಪಸ್ಥಿತರಿದ್ದರು.
ಕೆ.ಎಸೆಂ.ಸಿ.ಎ ಧರ್ಮಸ್ಥಳ ಘಟಕದ ಅಧ್ಯಕ್ಷ ಹಾಗೂ ಗ್ರಾ.ಪಂ ಸದಸ್ಯ ದೇವಸ್ಯ ಟಿ.ವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು. ಮಾರ್ಗರೇಟ್ ವಂದಿಸಿದರು. ಶಿಬಿರದಲ್ಲಿ ನೂರಾರು ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.







