ವೃತ್ತಿಪರ ವೈದ್ಯರು ಜ್ಞಾನವಂತರಾಗಿರಬೇಕು : ಡಾ. ಒ.ಪಿ.ಕಲ್ರಾ
ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ

ಕೊಣಾಜೆ,ನ.29: ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸುವವರು ಜ್ಞಾನವಂತರಾಗಿರುವುದು ಅತಿ ಮುಖ್ಯ. ಜ್ಞಾನವಿಲ್ಲದವರು ಆ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲು ಅನರ್ಹರು. ವೃತ್ತಿಪರ ವೈದ್ಯರು ಉದಾಸೀನತೆ ಹಾಗೂ ನಿರ್ಲಕ್ಷತೆ ತೋರದೆ ರೋಗಿಗಳಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡುವ ಜವಬ್ದಾರಿ ತಮ್ಮದು ಎಂಬುದನ್ನು ಮನಗಾಣಬೇಕು ಎಂದು ಹರಿಯಾಣ ರೋಟಕ್‌ನ ಪಂಡಿತ್ ಬಿ.ಡಿ. ಶರ್ಮ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಒ.ಪಿ. ಕಲ್ರಾ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕ್ಷೇಮ ಆಡಿಟೋರಿಯಂನಲ್ಲಿ ಸೋಮವಾರ ನಡೆದ ಹೈಫಾದ ‘ಯುನಿಟ್ ಆಪ್ ದಿ ಇಂಟರ್‌ನ್ಯಾಷನಲ್ ನೆಟ್‌ವರ್ಕ ಆಪ್ ದಿ ಯುನೆಸ್ಕೊ ಚೇರ್ ಇನ್ ಬಯೋ ಎಥಿಕ್ಸ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕೆಲವು ವೈದ್ಯರು ನಕಲಿ ವರದಿಗಳ ದಾಖಲೆಯನ್ನು ಸೃಷ್ಟಿಸಿದ ಪ್ರಕರಣಗಳ ಉಲ್ಲೇಖವಿದೆ. ಅದು ಸಾಬೀತಾದಾಗ ಕಠಿಣ ಸಜೆಗೂ ಗುರಿಯಾಗುತ್ತಾರೆ ಎಂಬ ತಿಳುವಳಿಕೆ ವೈದ್ಯರಿಗೆ ಬೇಕು. ಯೂರೋಪ್, ಅಮೇರಿಕಾದಲ್ಲಿ ಮಹಿಳೆಯ ಬಗ್ಗೆ ಹೆಚ್ಚಿನ ಗೌರವ ಇದೆ. ಹಾಗಿದ್ದರೂ ಹೆರಿಗೆ ಭಾರತೀಯ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವಾಗಿರುವ ಪ್ರಸವಪೂರ್ವ ಲಿಂಗ ಪರೀಕ್ಷೆಯಲ್ಲಿ ಕಾನೂನಿನ ಅಡ್ಡಿಯಿಲ್ಲ ಎಂದರು.
ವೈದ್ಯರಾದವರು ರೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಬೇಕು. ಅದು ರೋಗ ಉಪಶಮನದಲ್ಲೂ ಪಾತ್ರ ಬೀರುತ್ತದೆ. ಹಾಗಾಗಿ ಬೋಧಕ ವರ್ಗ ತಮ್ಮ ಬೋಧನೆಯಲ್ಲಿ ಮಾನವೀಯತೆ, ರೋಗಿಯ ಬಗ್ಗೆ ಕಾಳಜಿ ತೋರುವಂತಹ ಮನೋಭಾವ ಸೃಷ್ಟಿಸುವ ಕಾರ್ಯ ಮಾಡಿದಾಗ ,ವೈದ್ಯ ವಿದ್ಯಾರ್ಥಿಗಳು ವೃತ್ತಿಪರ ವೈದ್ಯರಾದಾಗ ಉತ್ತಮ ಸೇವೆ ಕೊಡುವುದು ತಮ್ಮ ಕರ್ತವ್ಯ ಎಂಬುದು ತಮ್ಮ ಮನಸ್ಸಿನಲ್ಲಿ ಬೇರೂರಿರುತ್ತದೆ. ಅವೆಲ್ಲದರ ಜೊತೆಗೆ ವೈದ್ಯ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ನೈತಿಕ ವಿಚಾರಗಳನ್ನು ಬೋಧಿಸಬೇಕು. ಆ ಕುರಿತು ಗಂಭೀರ ಚಿಂತನೆಯ ಅಗತ್ಯವಿದ್ದು, ಪಠ್ಯಕ್ರಮದಲ್ಲಿ ಅದನ್ನು ಅಳವಡಿಸುವ ಅಗತ್ಯತೆ ಇದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿಟ್ಟೆ ವಿವಿ ಸಹ ಕುಲಾಪತಿ ಪ್ರೊ.ಡಾ. ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಮನೆ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿಯೇ ಶಿಸ್ತು, ಮಾನವೀಯತೆಯ ಗುಣವನ್ನು ಮೈಗೂಡಿಸಿಕೊಂಡಾಗ ಎಲ್ಲ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಮಾನವೀಯತೆ ಇಲ್ಲದ ವಿಜ್ಞಾನ ಅಪಾಯಕಾರಿ . ಹಾಗೆಯೇ ತ್ಯಾಗವಿಲ್ಲದ ಧರ್ಮ, ತತ್ವಗಳಿಲ್ಲದ ರಾಜಕೀಯ, ಫಲವಿಲ್ಲದ ಸೇವೆ ಅರ್ಥಹೀನ ಎಂದರು.
ಕಾರ್ಯಕ್ರಮದಲ್ಲಿ ಹೈಫಾ ಯುನಸ್ಕೊ ಚೇರ್ ಇನ್ ಬಯೋ ಎಥಿಕ್ಸ್‌ನ ಏಷ್ಯಾ ಫೆಸಿಫಿಕ್ ವಿಭಾಗದ ಮುಖ್ಯಸ್ಥ ಡಾ. ರಸೆಲ್ ಡಿಸೋಜ, ಚೆನ್ನೆ ನ ಡಾ. ಎಂ.ಜಿ.ಆರ್. ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಗೀತಾ ಲಕ್ಷ್ಮಿ, ಕ್ಷೇಮ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ ಹಾಗೂ ಕ್ಷೇಮ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದ ಪ್ರೊಫೆಸರ್ ಹಾಗೂ ಯುನೆಸ್ಕೊ ಬಯೋ ಎಥಿಕ್ಸ್‌ನ ನಿಟ್ಟೆ ವಿವಿ ಘಟಕ ಕಾರ್ಯದರ್ಶಿ ಡಾ.ಶ್ರೀನಿವಾಸ್ ಭಟ್ ಉಪಸ್ಥಿತರಿದ್ದರು.
ನಿಟ್ಟೆ ವಿವಿ ಕುಲಪತಿ ಡಾ. ಎಸ್. ರಮಾನಂದ ಶೆಟ್ಟಿ ಸ್ವಾಗತಿಸಿದರು. ನಿಟ್ಟೆ ವಿವಿ ಕುಲಸಚಿವ ಡಾ.ಎಂ.ಎಸ್. ಮೂಡಿತ್ತಾಯ ವಂದಿಸಿದರು. ನಿಟ್ಟೆ ವಿವಿ ಪಠ್ಯಕ್ರಮಗಳ ನಿರ್ದೇಶಕ ಡಾ. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.







