ಸೂಪರ್ ಸ್ಟಾರ್ ಹಲವರಿದ್ದಾರೆ, ಆದರೆ ಆಮಿರ್ ಖಾನ್ ಒಬ್ಬರೇ !
ಯಾಕೆ ಅಂತ ಈ ವೀಡಿಯೊ ನೋಡಿದರೆ ಗೊತ್ತಾಗುತ್ತೆ

ನೀವು ಮಿ.ಪರ್ಫೆಕ್ಷನಿಸ್ಟ್ ಆಗಿದ್ದರೂ, ನೀವು ಆಮಿರ್ ಖಾನ್ ಆಗಿದ್ದರೂ ಕೆಲವು ಸವಾಲುಗಳು ನಿಮಗೂ ತುಂಬ ಕಠಿಣವಾಗುತ್ತವೆ. ಸದ್ಯವೇ ಬಿಡುಗಡೆಯಾಗಲಿರುವ ‘ದಂಗಾಲ್’ಚಿತ್ರದಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಇಂತಹುದೇ ಸವಾಲೊಂದನ್ನು ನಿಭಾಯಿಸಿರುವಂತಿದೆ. ನಿತೇಶ್ ತಿವಾರಿಯವರ ಚಿತ್ರ ‘ದಂಗಾಲ್’ನಲ್ಲಿ ಕುಸ್ತಿಪಟು ಮಹಾವೀರ ಸಿಂಗ್ ಫೋಗತ್ ಅವರ ಪಾತ್ರವನ್ನು ನಿರ್ವಹಿಸಿರುವ ಆಮಿರ್ ಚಿತ್ರದ ಶೂಟಿಂಗ್ ಆರಂಭಗೊಂಡಾಗ ಹದವಾದ ಮೈಕಟ್ಟು ಹೊಂದಿದ್ದರು. ಮಹಾವೀರ ತರುಣನಾಗಿದ್ದಾಗ ಮತ್ತು ವಯಸ್ಸಾದಾಗ ಬೊಜ್ಜು ಬೆಳೆದ ದೇಹದ ಅವರನ್ನು ತೋರಿಸುವುದು ನಿಜಕ್ಕೂ ಸವಾಲಾಗಿತ್ತು. ಆದರೆ ಆಮಿರ್ ಇದನ್ನು ಸವಾಲಾಗಿ ತೆಗೆದುಕೊಂಡಿದ್ದರು. ತಾನು ತೂಕವನ್ನು ಹೆಚ್ಚಿಸಿಕೊಂಡು ದಪ್ಪಹೊಟ್ಟೆಯೊಂದಿಗೆ ಮಹಾವೀರರ ವಯಸ್ಸಾದ ಪಾತ್ರವನ್ನು ನಿರ್ವಹಿಸುವುದಾಗಿ ಮತ್ತು ಬಳಿಕ ಸಿಕ್ಸ್ ಪ್ಯಾಕ್‌ನೊಂದಿಗೆ ಆ ಪಾತ್ರದಿಂದ ಹೊರಬರುವುದಾಗಿ ಅವರು ನಿತೇಶ್‌ಗೆ ತಿಳಿಸಿದ್ದರು. ಇದೊಂದು ಆಗದ ಹೋಗದ ವಿಚಾರ ಎಂದು ಹಲವಾರು ಜನರು ಆಡಿಕೊಂಡಿ ದ್ದರಾದರೂ ಆಮಿರ್ ಅದನ್ನು ಯಶಸ್ವಿಯಾಗಿ ಸಾಧಿಸಿದ್ದಾರೆ ಮತ್ತು ಈ ಅಚ್ಚರಿ ಫೇಸ್‌ಬುಕ್‌ನಲ್ಲಿ ಬಿಡುಗಡೆಯಾಗಿದೆ. ಈ ವೀಡಿಯೊ ವೀಕ್ಷಣೆಯ ಬಳಿಕ ಆಮಿರ್ ಕುರಿತಂತೆ ನಮ್ಮಲ್ಲಿ ಗೌರವ ಭಾವನೆ ತನ್ನಿಂತಾನೇ ಮೂಡಿರುತ್ತದೆ.
ಮಹಾವೀರ ಪಾತ್ರವನ್ನು ನಿರ್ವಹಿಸಲು ಆಮಿರ್ ಐದು ತಿಂಗಳಲ್ಲಿ 28 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಚಿತ್ರದ ಶೂಟಿಂಗ್ ವೇಳೆ ಅವರ ತೂಕ 98 ಕೆಜಿ ಯಿದ್ದು, ಬಗ್ಗಿ ಶೂ ಲೇಸ್ ಕಟ್ಟಿಕೊಳ್ಳಲೂ ಕಷ್ಟಪಡುವಂತಾಗಿತ್ತು. ಆ ಹಂತದಲ್ಲಿ ತನ್ನ ಆಂಗಿಕ ಹಾವಭಾವವೂ ಬದಲಾಗಿತ್ತು ಎನ್ನುತ್ತಾರೆ ಆಮಿರ್. ಆ ಬಳಿಕ ಅವರು ಪವಾಡ ಸದೃಶವಾಗಿ ತೂಕವನ್ನು ಇಳಿಸಿಕೊಂಡು ಮತ್ತೆ ಮೊದಲಿನ ಹಾಗಾಗುವಲ್ಲಿ ಯಶಸ್ವಿಯಾಗಿದ್ದಾರೆ
ನನ್ನ ಚಿತ್ರಗಳಲ್ಲಿ ಕೆಲವೊಮ್ಮೆ ನಿರ್ದಿಷ್ಟ ಪಾತ್ರಕ್ಕಾಗಿ ಕಸರತ್ತು ಮಾಡಿ ದೇಹವನ್ನು ಹುರಿಗಟ್ಟಿಸಿದ್ದೆ. ಆದರೆ ‘ದಂಗಾಲ್’ನ ಪಾತ್ರ ಅತ್ಯಂತ ನಾಟಕೀಯ ಶರೀರ ಪರಿವರ್ತನೆಯಾಗಿತ್ತು. ಚಿತ್ರದಲ್ಲಿ ಎರಡು ಹಂತಗಳಿವೆ. ಮೊದಲ ಭಾಗಕ್ಕಾಗಿ ನಾನು ತೂಕವನ್ನು ಹೆಚ್ಚಿಸಿಕೊಳ್ಳಬೇಕಿತ್ತು. ಬಳಿಕ ಐದು ತಿಂಗಳಲ್ಲಿ ಅಷ್ಟೂ ಕೊಬ್ಬನ್ನು ಕರಗಿಸಬೇಕಿತ್ತು. ನಿಜಕ್ಕೂ ಅದೊಂದು ಕಠಿಣ ಕೆಲಸವಾಗಿತ್ತು ಎಂದಿದ್ದಾರೆ ಆಮಿರ್.
ದಿಢೀರ್ ಆಗಿ ತೂಕವನ್ನು ಹೆಚ್ಚಿಸಿಕೊಳ್ಳುವುದು ಮತ್ತು ತೂಕವನ್ನು ಕಳೆದುಕೊಳ್ಳುವುದು ಆರೋಗ್ಯಕ್ಕೆ ತುಂಬ ಅಪಾಯಕಾರಿ. ನಾನು ನನ್ನ ಚಿತ್ರಕ್ಕಾಗಿ ತಜ್ಞರ ನಿಗಾದಡಿ ಆ ಪ್ರಯತ್ನ ಮಾಡಿದ್ದೆ. ಆದರೆ ಯಾವುದೇ ಮಾಮೂಲು ವ್ಯಕ್ತಿ ಇಂತಹ ಪ್ರಯತ್ನ ಮಾಡುವುದು ಅಪಾಯಕಾರಿ ಎಂಬ ಎಚ್ಚರಿಕೆಯ ಸಂದೇಶವನ್ನು ಅವರು ನೀಡಿದ್ದಾರೆ.







