ಸುಳ್ಯ ನಪಂ ಎದುರು ರಿಕ್ಷಾ ಚಾಲಕರಿಂದ ಪ್ರತಿಭಟನೆ
ಗಾಂಧಿನಗರ ರಸ್ತೆ ಬದಿ ಮಣ್ಣು ಸುರಿದ ಪ್ರಕರಣ

ಸುಳ್ಯ,ನ.29: ಸುಳ್ಯ ಗಾಂಧಿನಗರದ ರಿಕ್ಷಾ ಪಾರ್ಕಿಂಗ್ ಬಳಿ ರಸ್ತೆ ಬದಿ ಟಿಪ್ಪರ್‌ನಲ್ಲಿ ಮಣ್ಣು ತಂದು ಹಾಕಿದ ಘಟನೆ ನಡೆದಿದ್ದು, ಇದನ್ನು ರಿಕ್ಷಾ ಚಾಲಕರು ಆಕ್ಷೇಪಿಸಿದ್ದಾರೆ.
ಗಾಂಧಿನಗರದ ಶಿಲ್ಪಾ ಕಾಂಪ್ಲೆಕ್ಸ್ ಎದುರು ರಸ್ತೆ ಬದಿ ಮಣ್ಣು ತಂದು ಹಾಕಲಾಗಿದೆ. ಅಲ್ಲಿ ರಿಕ್ಷಾ ಪಾರ್ಕಿಂಗ್ ಸ್ಥಳವಾಗಿದ್ದು, ಅಲ್ಲಿಂದ ಮಣ್ಣನ್ನು ತೆರವು ಮಾಡುವಂತೆ ಸೇರಿದ ರಿಕ್ಷಾ ಚಾಲಕರು ಆಗ್ರಹಿಸುತ್ತಿದ್ದರೂ ನಗರ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇರುವುದರಿಂದ ಪಂಚಾಯತ್ ಕಚೇರಿ ಎದುರು ಹಠಾತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್, ಗಾಂಧಿನಗರದಲ್ಲಿ ಮಣ್ಣು ಹಾಕಿದ್ದನ್ನು ತಕ್ಷಣ ತೆರವು ಮಾಡಬೇಕು. ಅಲ್ಲಿನ ಪಾರ್ಕಿಂಗ್‌ನ್ನು ಅಧಿಕೃತಗೊಳಿಸಬೇಕು. ಗುರುಂಪು-ನಾಗಪಟ್ಟಣ ರಸ್ತೆಯನ್ನು ಸಂಚಾರಯೋಗ್ಯವನ್ನಾಗಿಸಬೇಕು. ರಸ್ತೆ ಬದಿಯ ತೆರೆದ ಚರಂಡಿಯಲ್ಲಿ ಹೋಟೇಲ್‌ನವರು ಕೊಳಚೆ ನೀರುನ್ನು ಬಿಡುತ್ತಿದ್ದು, ಅದನ್ನು ಒಳಚರಂಡಿಗೆ ಸಂಪರ್ಕಿಸಬೇಕು. ಬಸ್ ನಿಲ್ದಾಣದ ಬಳಿ ಬೆಳಗ್ಗಿನ ಹೊತ್ತು ನಿಲ್ಲುವ ಕಾರ್ಮಿಕರು ಅಲ್ಲಿ ಗಲೀಜು ಮಾಡುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡ ಪೈಚಾರು ಗೋಪಾಲಕೃಷ್ಣ ಭಟ್ , ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ನಾಗರಾಜ ಮುಳ್ಯ ಮಾತನಾಡಿದರು.
ಬಳಿಕ ಮುಖ್ಯಾಧಿಕಾರಿ ಚಂದ್ರ ಕುಮಾರ್‌ರಿಗೆ ಮನವಿ ಸಲ್ಲಿಸಲಾಯಿತು. ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸದಸ್ಯ ಪ್ರಕಾಶ್ ಹೆಗ್ಡೆ, ಎಸ್‌ಐ ಚಂದ್ರಶೇಖರ್ ಉಪಸ್ಥಿತರಿದ್ದರು.







