ತೆರಿಗೆ ಕಾನೂನು ತಿದ್ದುಪಡಿ ಮಸೂದೆ ಮಂಜೂರು

ಹೊಸದಿಲ್ಲಿ, ನ.29: ನೋಟು ರದ್ದತಿಯ ಬಳಿಕ ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸಲಾದ ಹಣಕ್ಕೆ ತೆರಿಗೆ ವಿಧಿಸುವ ಕುರಿತಾದ ಮಸೂದೆಯೊಂದು ಲೋಕಸಭೆಯಲ್ಲಿಂದು ವಿಪಕ್ಷಗಳ ಕೋಲಾಹಲದ ನಡುವೆಯೇ, ಯಾವುದೇ ಚರ್ಚೆಯಿಲ್ಲದೆ, ಕೆಲವೇ ನಿಮಿಷಗಳೊಳಗೆ ಮಂಜೂರಾಗಿದೆ.
ವಿಪಕ್ಷೀಯರ ಭೀಕರ ಘೋಷಣೆಗಳ ನಡುವೆಯೇ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಕೆಲವರು ರದ್ದುಗೊಳಿಸಲಾಗಿರುವ ರೂ.500 ಹಾಗೂ 1000ದ ನೋಟುಗಳನ್ನು ಕಾನೂನುಬಾಹಿರವಾಗಿ ಬದಲಾಯಿಸಲು ಯತ್ನಿಸುತ್ತಿರುವುದು ಸರಕಾರದ ಗಮನಕ್ಕೆ ಬಂದ ಬಳಿಕ. ತೆರಿಗೆ ಕಾನೂನು(2ನೆ ತಿದ್ದುಪಡಿ) ಮಸೂದೆ-2016ನ್ನು ತರಲಾಗಿದೆ ಎಂದರು.
ಪ್ರಸ್ತಾವಿತ ತಿದ್ದುಪಡಿಯಂತೆ, ಕಾನೂನುಬಾಹಿರ ನೋಟು ಬದಲಾವಣೆಯಲ್ಲಿ ಸಿಕ್ಕಿಬಿದ್ದವರಿಗೆ ಶೇ.60 ತೆರಿಗೆ ಹಾಗೂ ದಂಡ ವಿಧಿಸಲಾಗುವುದು. ಅದು ಒಟ್ಟು ಶೇ.85ರ ವರೆಗಾಗಬಹುದು. ಬ್ಯಾಂಕ್‌ಗಳಲ್ಲಿ ಕಪ್ಪು ಹಣದ ಘೋಷಣೆ ಮಾಡುವವರು ಮೇಲ್ತೆರಿಗೆ ಹಾಗೂ ದಂಡ ಸಹಿತ ಶೇ.50 ತೆರಿಗೆ ಪಾವತಿಸಿದರೆ ಸಾಕು. ಅವರಿಗೆ ಉಳಿದುದರಲ್ಲಿ ಶೇ.25ರಷ್ಟು ಹಣವನ್ನು ತಕ್ಷಣ ಮರಳಿಸಲಾಗುವುದು. ಉಳಿದ ಶೇ.25ನ್ನು 4 ವರ್ಷಗಳ ಬಳಿಕ ಹಿಂದಿರುಗಿಸಲಾಗುವುದು ಎಂದು ಅವರು ವಿವರಿಸಿದರು.
ಇದು ಸರಕಾರಕ್ಕೆ ಗರೀಬ್ ಕಲ್ಯಾಣ ಕೋಶದಂತಹ ಯೋಜನೆಗಳಿಗೆ ಹಾದಿಯೊದಗಿಸುತ್ತದೆ. ತಿದ್ದುಪಡಿಯನ್ನು ಮಂಜೂರು ಮಾಡುವಂತೆ ತಾನು ಸದನಕ್ಕೆ ಒತ್ತಾಯ ಮಾಡುತ್ತಿದ್ದೇನೆಂದು ಜೇಟ್ಲಿ ಹೇಳಿದರು.
ಮಸೂದೆಯು ಸಾರ್ವಜನಿಕ ಪ್ರಾಮುಖ್ಯದ ತುರ್ತು ಕಾಯ್ದೆಯಾಗಿರುವುದರಿಂದ ಅದನ್ನು ತಕ್ಷಣವೇ ಮಂಜೂರು ಮಾಡಬೇಕು. ಚರ್ಚೆ ನಡೆಯಬೇಕಾಗಿದ್ದರೂ ವಿಪಕ್ಷ ಸದಸ್ಯರ ನಡವಳಿಕೆಯಿಂದ ಅದು ಅಸಾಧ್ಯವಾಗಿದೆಯೆಂದು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ತಿಳಿಸಿದರು.
ಮಸೂದೆಯು ಬಳಿಕ ಧ್ವನಿ ಮತದಲ್ಲಿ ಅಂಗೀಕಾರವಾಯಿತು. ಇದು ಹಣಕಾಸು ಮಸೂದೆಯಾಗಿರುವುದರಿಂದ ರಾಜ್ಯಸಭೆಯ ಅಂಗೀಕಾರ ಅಗತ್ಯವಿಲ್ಲ.







