ಬಾಯಿ ಕ್ಯಾನ್ಸರ್ ಗಾಯ ಮಾಗಲು ಜೇನುತುಪ್ಪ ರಾಮಬಾಣ

ಕೋಲ್ಕತಾ, ನ.29: ಹಲವು ವರ್ಷಗಳ ಸಂಶೋಧನೆಯ ಬಳಿಕ ಭಾರತೀಯ ವಿಜ್ಞಾನಿಗಳ ತಂಡವೊಂದು ಬಾಯಿ ಕ್ಯಾನ್ಸರ್‌ನ ಗಾಯ ಬೇಗನೆ ವಾಸಿಯಾಗಲು ಜೇನುತುಪ್ಪ ದಿವ್ಯ ಔಷಧಿ ಎಂದು ಕಂಡುಹಿಡಿದಿದ್ದಾರೆ.
ಖರಗಪುರ ಐಐಟಿಯ ರಸಾಯನ ವಿಜ್ಞಾನ ಇಂಜಿನಿಯರ್‌ಗಳು, ಜೀವಶಾಸ್ತ್ರ ತಂತ್ರಜ್ಞರು ಮತ್ತು ವೈದ್ಯರ ತಂಡ ಸಿಲ್ಕ್‌ನಿಂದ ತಯಾರಿಸಿ, ಜೇನುತುಪ್ಪ ಬೆರೆಸಿರುವ ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ.
ಬಾಯಿಯ ಕ್ಯಾನ್ಸರ್ ಸಮಸ್ಯೆಯಿದ್ದವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಈ ವೇಳೆ ಕ್ಯಾನ್ಸರ್ ಬಾಧಿತ ಭಾಗವನ್ನು ಕತ್ತರಿಸಿ ತೆಗೆಯಲಾಗುತ್ತದೆ. ಈ ಸಂದರ್ಭ ಉಂಟಾಗುವ ಗಾಯದಲ್ಲಿ ಕ್ಯಾನ್ಸರ್‌ನ ಕೆಲವು ಅಂಶ ಸೂಕ್ಷ್ಮವಾಗಿ ಉಳಿದುಕೊಳ್ಳುವ ಸಾಧ್ಯತೆಯಿದ್ದು ಇದರಿಂದ ಮತ್ತೆ ಕ್ಯಾನ್ಸರ್ ಬಾಧಿಸಬಹುದು. ಈ ಗಾಯ ಪರಿಣಾಮಕಾರಿಯಾಗಿ ಮತ್ತು ಕ್ಷಿಪ್ರವಾಗಿ ಮಾಗಲು ಈ ನೂತನ ಔಷಧಿ ವರದಾನವಾಗಿದೆ ಎಂದು ಎಂದು ಸಂಶೋಧಕಿ ಮೋನಿಕಾ ರಾಜ್‌ಪುತ್ ತಿಳಿಸಿದ್ದಾರೆ.
ಗಾಯ ಗುಣಪಡಿಸುವಲ್ಲಿ ಜೇನುತುಪ ್ಪ ಪರಿಣಾಮಕಾರಿ ಎಂಬುದು ತಿಳಿದಿರುವ ವಿಷಯ. ಜೇನುತುಪ್ಪವು ಅಲ್ಲದೆ ಕ್ಯಾನ್ಸರ್ ವಿರುದ್ಧ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಕೂಡಾ ಉತ್ತಮ ಔಷಧೀಯ ಅಂಶವನ್ನು ಒಳಗೊಂಡಿದೆ. ಖರಗ್‌ಪುರ ಐಐಟಿಯ ಪ್ರೊಫೆಸರ್ ರಬಿಬಾತ್ರ ಮುಖರ್ಜಿ ಮತ್ತು ಜ್ಯೋತಿರ್ಮಯಿ ಚಟರ್ಜಿ ಅವರನ್ನೊಳಗೊಂಡ ತಂಡವು ಈ ಔಷಧಿಯನ್ನು ಸಂಶೋಧಿಸಿದೆ ಎಂದವರು ತಿಳಿಸಿದ್ದಾರೆ. ಇವರ ಸಂಶೋಧನಾ ಕಾರ್ಯದ ವರದಿಯು ಅಮೆರಿಕಾದ ‘ಎಸಿಬಿ ಬಯೊಮೆಟಿರಿಯಲ್ಸ್ ಸೈಯನ್ಸ್ ಆ್ಯಂಡ್ ಇಂಜಿನಿಯರಿಂಗ್’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ತಮ್ಮ ಸಂಶೋಧನೆಯ ಪೇಟೆಂಟ್‌ಗಾಗಿ ಈ ತಂಡ ಅರ್ಜಿ ಸಲ್ಲಿಸಿದೆ. ಈ ಔಷಧಿಯನ್ನು ಪ್ರಾಣಿಗಳ ಮೇಲೆ ಮೊದಲು ಪ್ರಯೋಗಿಸಿ, ಪರಿಣಾಮವನ್ನು ಗಮನಿಸಿ ಬಳಿಕ ಮನುಷ್ಯ ಬಳಕೆಗೆ ಅನುಮತಿ ನೀಡಲಾಗುತ್ತದೆ.







