ಶ್ರೀಲಂಕಾ: ಪ್ರಭಾಕರನ್ ಬಲಗೈ ಬಂಟನ ಸೆರೆ

ಕೊಲಂಬೊ, ನ. 29: ಹಿಂದಿನ ಮಹಿಂದ ರಾಜಪಕ್ಸ ಸರಕಾರದ ಅವಧಿಯಲ್ಲಿ ಆರ್ಥಿಕ ಅವ್ಯವಹಾರಗಳನ್ನು ನಡೆಸಿದ ಆರೋಪದಲ್ಲಿ, ಎಲ್ಟಿಟಿಇಯ ಮಾಜಿ ಉಪ ಮುಖ್ಯಸ್ಥ ಹಾಗೂ ಮುಖ್ಯಸ್ಥ ವೇಲುಪಿಳ್ಳೆ ಪ್ರಭಾಕರನ್‌ರ ಬಲಗೈ ಬಂಟನಾಗಿದ್ದ ವಿನಾಯಕಮೂರ್ತಿ ಮುರಳೀಧರನ್‌ರನ್ನು ಇಂದು ಬಂಧಿಸಲಾಗಿದೆ.
ಸರಕಾರದ ವಾಹನಗಳ ದುರ್ಬಳಕೆ ನಡೆಸಿರುವ ಆರೋಪದಲ್ಲಿ ಹೇಳಿಕೆ ನೀಡಲು ಇಂದು ಬೆಳಗ್ಗೆ ಆರ್ಥಿಕ ಅಪರಾಧಗಳ ತನಿಖಾ ಇಲಾಖೆಯ ಕಚೇರಿಗೆ ಹಾಜರಾಗುವಂತೆ ಮುರಳೀಧರನ್ ಯಾನೆ ಕರುಣಾರಿಗೆ ಸೂಚಿಸಲಾಗಿತ್ತು. ರಾಜಪಕ್ಸ ಸರಕಾರದಲ್ಲಿ ಅವರು ಸಚಿವರಾಗಿದ್ದರು.
ಕಚೇರಿಗೆ ಆಗಮಿಸಿದ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಶ್ರೀಲಂಕಾದ ಆಂತರಿಕ ಯುದ್ಧದ ಅವಧಿಯಲ್ಲಿ ಮುರಳೀಧರನ್ ಮಾನವಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿದ್ದರು ಎಂಬುದಾಗಿ ಮಾನವಹಕ್ಕು ಗುಂಪುಗಳು ಮತ್ತು ವಿಶ್ವಸಂಸ್ಥೆಯ ಇಲಾಖೆಗಳು ಆರೋಪಿಸಿವೆ.
ಸುಮಾರು ಮೂರು ದಶಕಗಳ ಕಾಲ ನಡೆದ ಆಂತರಿಕ ಸಂಘರ್ಷವು 2009ರಲ್ಲಿ ಎಲ್ಟಿಟಿಇಯ ಸೋಲಿನೊಂದಿಗೆ ಮುಕ್ತಾಯಗೊಂಡಿತ್ತು.
Next Story







