ದಾಖಲೆ ರಹಿತ 2ಸಾವಿರ ಮುಖಬೆಲೆಯ 35ಲಕ್ಷ ರೂ ಸಾಗಾಟ; ಐವರ ಬಂಧನ
ಭಟ್ಕಳ ಪೊಲೀಸರ ಕಾರ್ಯಾಚರಣೆ

ಭಟ್ಕಳ, ನ.29: ದಾಖಲೆಗಳಿಲ್ಲದ 2 ಸಾವಿರ ರೂ. ಮುಖಬೆಲೆಯ ಸುಮಾರು 35 ಲಕ್ಷ ರೂ. ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಶಿವಮೊಗ್ಗ ಹೊಸನಗರದ ಐವರನ್ನು ಭಟ್ಕಳ ಪೊಲೀಸರು ವಾಹನ ಸಹಿತ ವಶಕ್ಕೆ ಪಡೆದಿರುವ ಘಟನೆ ಸಾಗರ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಆರೋಪಿಗಳನ್ನು ಸಾಗರ ತಾಲೂಕಿನ ಹೊಸನಗರ ನಿವಾಸಿಗಳಾದ ಉದಯಕಾಡಪ್ಪಗೌಡ, ಸುಬ್ರಹ್ಮಣ್ಯ ವಾಸಪ್ಪಗೌಡ, ರುದ್ರಮುನಿ ಓಂಕಾರಪ್ಪಗೌಡ, ಸುರೇಶ ಗಣಪತಿ ಮುಂಬಾರ, ಪ್ರದೀಪ ಕೃಷ್ಣ ಮೂರ್ತಿ ಎಂದು ಗುರುತಿಸಲಾಗಿದೆ. ಆರೋಪಿಗಳು ಯಾವುದೇ ದಾಖಲೆಗಳಿಲ್ಲದೆ 2ಸಾವಿರ ರೂ. ಮುಖಬೆಲೆಯ ಸುಮಾರು 35ಲಕ್ಷ ರೂ. ಸಾಗರದ ಕಡೆ ಸಾಗಿಸುತ್ತಿದ್ದ ವೇಳೆ ರಸ್ತೆ ಮಧ್ಯೆ ಭಟ್ಕಳ ಪೊಲೀಸರು ತಪಾಸಣೆ ನಡೆಸಿದ ವೇಳೆ ಈ ಪ್ರಕರಣ ಬಯಲಿಗೆ ಬಂದಿದೆ.
ಯಾವ ಉದ್ದೇಶಕ್ಕಾಗಿ ಇಷ್ಟೊಂದು ಮೊತ್ತದ ಹಣವನ್ನು ಸಾಗಾಟ ಮಾಡುತ್ತಿದ್ದರು ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ. ಭಟ್ಕಳದಲ್ಲಿ ಕಮಿಷನ್ ಆಧಾರದಲ್ಲಿ ಕಪ್ಪುಹಣವನ್ನು ಬಿಳಿಯಾಗಿಸುವ ದಂಧೆ ನಡೆಉತ್ತಿರುವ ಕುರಿತು ಈಗಾಗಲೇ ಸುದ್ದಿ ಹರದಿದ್ದು, ಪೊಲೀಸರು ಈ ಹಿನ್ನೆಲೆಯಲ್ಲಿಯೂ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಮದುವರಿದಿದೆ.





