ಸಿರಿಯ: 5 ಲಕ್ಷ ಮಕ್ಕಳು ಮುತ್ತಿಗೆಯಲ್ಲಿ ಮಾನವೀಯ ನೆರವಿಗೆ ಅವಕಾಶ ಕಲ್ಪಿಸಿ; ಯುನಿಸೆಫ್ ಕರೆ

ವಿಶ್ವಸಂಸ್ಥೆ, ನ. 29: ಸಿರಿಯದಲ್ಲಿ ಹಿಂಸಾಚಾರ ಉಲ್ಬಣಗೊಳ್ಳುತ್ತಿದ್ದಂತೆಯೇ, ಸುಮಾರು 5 ಲಕ್ಷ ಮಕ್ಕಳು ಮುತ್ತಿಗೆಯಡಿಯಲ್ಲಿ ಜೀವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಹೇಳಿದೆ.
ಮುತ್ತಿಗೆಗಳನ್ನು ತೆರವುಗೊಳಿಸಿ, ತುರ್ತು ಮಾನವೀಯ ನೆರವಿಗೆ ಅವಕಾಶ ಕಲ್ಪಿಸುವಂತೆ ಅದು ಕರೆ ನೀಡಿದೆ.
ಮುತ್ತಿಗೆಯಡಿಯಲ್ಲಿ ಜೀವಿಸುತ್ತಿರುವ ಮಕ್ಕಳ ಸಂಖ್ಯೆ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ದ್ವಿಗುಣಗೊಂಡಿದೆ ಎಂದು ಯುನಿಸೆಫ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ ಎಂದು ಕ್ಸಿನುವಾ ವಾರ್ತಾ ಸಂಸ್ಥೆ ವರದಿ ಮಾಡಿದೆ.
‘‘ದೇಶಾದ್ಯಂತವಿರುವ 16 ಮುತ್ತಿಗೆಗೊಳಗಾದ ಪ್ರದೇಶಗಳಲ್ಲಿ ಈಗ ಸುಮಾರು 5 ಲಕ್ಷ ಮಕ್ಕಳು ಜೀವಿಸುತ್ತಿದ್ದಾರೆ. ಈ ಮಕ್ಕಳು ಬಹುತೇಕ ಎಲ್ಲ ಬಗೆಯ ಮಾನವೀಯ ನೆರವು ಹಾಗೂ ಮೂಲಭೂತ ಸೇವೆಗಳಿಂದ ವಂಚಿತರಾಗಿದ್ದಾರೆ’’ ಎಂದು ಯುನಿಸೆಫ್ ತಿಳಿಸಿದೆ.
‘‘ಸಿರಿಯದ ಲಕ್ಷಾಂತರ ಮನುಷ್ಯರಿಗೆ ಬದುಕೆನ್ನುವುದು ನಿರಂತರ ದುಃಸ್ವಪ್ನವಾಗಿದೆ. ಮುಖ್ಯವಾಗಿ ಲಕ್ಷಾಂತರ ಮಕ್ಕಳು ಮುತ್ತಿಗೆಯಡಿಯಲ್ಲಿ ಬದುಕುತ್ತಿದ್ದಾರೆ’’ ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿದೇಶಕ ಆ್ಯಂತನಿ ಲೇಕ್ ಹೇಳಿದ್ದಾರೆ.
‘‘ಮಕ್ಕಳನ್ನು ಕೊಲ್ಲಲಾಗುತ್ತಿದೆ, ಗಾಯಗೊಳಿಸಲಾಗುತ್ತಿದೆ ಹಾಗೂ ಮಕ್ಕಳು ಹೆದರಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ. ಅವರು ಶಾಲೆಗೆ ಹೋಗಲು ಅಥವಾ ಆಟ ಆಡಲೂ ಹೆದರುತ್ತಿದ್ದಾರೆ. ಸ್ವಲ್ಪ ಆಹಾರ ಮತ್ತು ಔಷಧಿಯಿಲ್ಲದೇ ಬದುಕುತ್ತಿದ್ದಾರೆ’’ ಎಂದು ಅವರು ಹೇಳಿದ್ದಾರೆ.







