ಅಕ್ರಮ ಮದ್ಯ ದಾಸ್ತಾನು ಪ್ರಕರಣ ; ಮೂವರು ಆರೋಪಿಗಳಿಗೆ ಜಾಮೀನು
ಪುತ್ತೂರು, ನ.29: ಮನೆಯೊಂದರ ಬಳಿ ಅಕ್ರಮವಾಗಿ ಮದ್ಯ ದಾಸ್ತಾನಿರಿಸಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪುತ್ತೂರು ನಗರ ಪೊಲೀಸರಿಂದ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ನೀಡಿದೆ.
ಆರೋಪಿಗಳಾದ ಪುತ್ತೂರು ತಾಲ್ಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ದೇವಪ್ಪ ನಾಯ್ಕ ಅವರ ಪುತ್ರ ರಮಾನಾಥ ನಾಯ್ಕ ಮತ್ತು ಅವರ ಪತ್ನಿ ಕಾತ್ಯಾಯಿನಿ ಹಾಗೂ ನರಿಮೊಗ್ರು ಗ್ರಾಮದ ನೆಕ್ಕಿಲು ನಿವಾಸಿ ನೇಮು ಪೂಜಾರಿ ಅವರ ಪುತ್ರ ಯಾದವ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಪುತ್ತೂರು ನಗರಠಾಣೆಯ ಎಸ್‌ಐ ಒಮನ ಅವರ ನೇತೃತ್ವದಲ್ಲಿ ಸಿಬ್ಬಂದಿ ಹರೀಶ್, ಶ್ರೀಶೈಲ ,ಧನ್ಯಶ್ರೀ ಅವರು ಕಳೆದ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿ ರಮಾನಾಥ ನಾಯ್ಕ ಅವರ ಮನೆಯ ಸಮೀಪ ಬಚ್ಚಿಡಲಾಗಿದ್ದ 180 ಎಂಎಲ್‌ನ ಮೈಸೂರ್ ಲ್ಯಾನ್ಸರ್ ವಿಸ್ಕಿಯ 52 ಬಾಟಲಿಯನ್ನು ಪೊಲೀಸರು ವಶಪಡಿಸಿಕೊಂಡು ಈ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ನ್ಯಾಯಾಲಯ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.







