ಡಿ.3ರಿಂದ ಕಿಶೋರ ಯಕ್ಷ ಸಂಭ್ರಮ

ಉಡುಪಿ, ನ.29: ಯಕ್ಷಶಿಕ್ಷಣ ಟ್ರಸ್ಟ್ ಪ್ರತಿವರ್ಷ ಆಯೋಜಿಸುತ್ತಿರುವ ‘ಕಿಶೋರ ಯಕ್ಷ ಸಂಭ್ರಮ’ದ ಈ ವರ್ಷದ ಪ್ರದರ್ಶನ ಡಿ.3ರಂದು ಸಂಜೆ 4:00 ಗಂಟೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ.
ಪರ್ಯಾಯ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಶಾಲಾ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸ ಲಿದ್ದಾರೆ.
ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ.ವಿಜಯ ಬಲ್ಲಾಳ್ ಮತ್ತು ಮಾಜಿ ಶಾಸಕ ಕೆ.ರಘುಪತಿ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ವರ್ಷ 41 ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ನೀಡಲಾಗುತ್ತಿದ್ದು, ಒಟ್ಟು 27 ಶಾಲೆಗಳ ಪ್ರದರ್ಶನ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪ್ರತಿ ಪ್ರದರ್ಶನ ಒಂದೂವರೆ ಗಂಟೆ ಅವಧಿಯದ್ದಾಗಿರುತ್ತದೆ. ಡಿ.18ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಯಕ್ಷಶಿಕ್ಷಣದ ಹಿರಿಯ ಗುರುಗಳಾದ ರಾಜೀವ ತೋನ್ಸೆ ಅವರನ್ನು ಸಮ್ಮಾನಿಸಲಾಗುವುದು.
ಬ್ರಹ್ಮಾವರ ವಲಯದ 14 ಶಾಲೆಗಳ 15 ಪ್ರದರ್ಶನಗಳು ಡಿ.21ರಿಂದ 28 ರವರೆಗೆ ಬ್ರಹ್ಮಾವರದಲ್ಲಿ ನಡೆಯಲಿವೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







