ಕಾರ್ಮಿಕರಿಗೆ ತಟ್ಟಿದ ನೋಟು ಅಮಾನ್ಯ ಬಿಸಿ

2 ವಾರಗಳಿಂದ ಸಿಗದ ವೇತನ
ಕಂಗಾಲಾದ ಕಾರ್ಮಿಕರು ಕೆಲಸ
ಸ್ಥಗಿತಗೊಳಿಸುವ ಎಚ್ಚರಿಕೆ
ಸಿದ್ದಾಪುರ, ನ.28: ಖಾಸಗಿ ಕಂಪೆನಿಯೊಂದರ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಎರಡು ವಾರಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ಚೌಡಿಕಾಡು ಕಾಫಿತೋಟದ ಮೈದಾನದಲ್ಲಿ ಸಿಐಟಿಯು ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಸ್ಥಳೀಯ ಬಿಬಿಟಿಸಿ ಕಂಪೆನಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಪ್ರತಿವಾರ ವೇತನ ನೀಡಲಾಗುತ್ತಿತ್ತು. ಕೇಂದ್ರ ಸರಕಾರದ ನೋಟು ರದ್ದತಿ ಹಿನ್ನೆಲೆಯಿಂದಾಗಿ ಕಾರ್ಮಿಕರಿಗೆ 2 ವಾರಗಳಿಂದ ವೇತನ ನೀಡಿಲ್ಲ ಎಂದು ಪ್ರತಿಭಟನಾ ನಿರತ ಕಾರ್ಮಿಕರು ಆರೋಪಿಸಿದ್ದಾರೆ.
ಕೂಲಿ ಕೆಲಸ ಮಾಡಿ ದಿನ ನೀತ್ಯದ ಜೀವನ ನಡೆಸುವ ಕಾರ್ಮಿಕರಿಗೆ ಬ್ಯಾಂಕ್‌ಗಳಿಗೆ ತೆರಳಿ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಮನೆಯಲ್ಲೇ ಉಳಿದು ಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ದಿನ ನಿತ್ಯದ ಬಳಕೆಗೆ ಹಣದ ಆವಶ್ಯಕತೆ ಅಗತ್ಯ ತೀರಾಇದ್ದು, ಅಂಗಡಿಗಳಲ್ಲಿ ಯಾವುದೇ ವಸ್ತುಗಳನ್ನು ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರು ಕೇಂದ್ರ ಸರಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಮಹದೇವ, ಕಾರ್ಮಿಕರು ಹೊಟ್ಟೆಪಾಡಿಗಾಗಿ ಕೆಲಸ ಮಾಡುವವರು. ವೇತನ ಸಿಗದೆ ಕಂಗಲಾಗಿದ್ದಾರೆ.
ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಒಂದು ವಾರದಲ್ಲಿ ಕಾರ್ಮಿಕ ವೇತನ ಸಮಸ್ಯೆ ಬಗಹರಿಸದ್ದಿಲ್ಲಿ ಎಲ್ಲಾ ತೋಟಗಳ ಕಾರ್ಮಿಕರನ್ನು ಒಗ್ಗೂಡಿಸಿಕೊಂಡು ಕೆಲಸ ಸ್ಥಗಿತಗೊಳಿಸಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಸಿಐಟಿಯು ಜಿಲ್ಲಾ ಮುಖಂಡ ದುರ್ಗಪ್ರಸಾದ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.







