ಅಪಘಾತ: ನಾಲ್ವರಿಗೆ ಗಾಯ
ಅಂಕೋಲಾ, ನ.29: ಸಾರಿಗೆ ಬಸ್ ಬ್ರೇಕ್ ಫೇಲಾಗಿ ಗುಡಕ್ಕೆ ಅಪ್ಪಳಿಸಿದ ಪರಿಣಾಮ ಬಸ್ ನಿರ್ವಾಹಕ ಸೇರಿದಂತೆ ನಾಲ್ವರು ಪ್ರಯಾಣಿಕರಿಗೆ ಸಣ್ಣ ಪುಟ್ಟಗಾಯಗಳಾದ ಘಟನೆ ತಾಲೂಕಿನ ಹಾರವಾಡ ಘಟ್ಟದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಕಾರವಾರ ಘಟಕಕ್ಕೆ ಸೇರಿದ ಸಾರಿಗೆ ಬಸ್ ಕುಮಟಾದಿಂದ ಕಾರವಾರಕ್ಕೆ ತೆರಳುತ್ತಿತ್ತು. ಬಸ್ ನಿರ್ವಾಹಕ ಪಿ.ಎಂ. ಗೌಡ ಎಂಬವರಿಗೆ ಎದೆ ಮತ್ತು ಕಾಲಿನ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಅವರನ್ನು ಕಾರವಾರ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಇನ್ನುಳಿದ ಮೂವರು ಪ್ರಯಾಣಿಕರಿಗೆ ಲಘು ಗಾಯವಾಗಿದೆ. ಬ್ರೇಕ್ ಫೇಲಾದ ಕುರಿತು ಬಸ್ ಚಾಲಕ ಚಂದ್ರಶೇಖರ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಸ್ ಗುಡ್ಡಕ್ಕೆ ಅಪ್ಪಳಿಸಿರುವ ಸನ್ನಿವೇಶವನ್ನು ವೀಕ್ಷಿಸಿದ ಯಲ್ಲಾಪುರದಿಂದ ಕಾರ ವಾರಕ್ಕೆ ಕರ್ತವ್ಯದಲ್ಲಿ ತೆರಳುತ್ತಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅಂಕೋಲಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ತಕ್ಷಣ ಪಿಎಸ್ಸೈ ಎಚ್.ಓಂಕಾರಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಪಘಾತವಾದ ಸ್ಥಳವು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





