ಜೂನಿಯರ್ ಹಾಕಿ ವಿಶ್ವಕಪ್‌ನಿಂದ ಪಾಕ್ ಹೊರಕ್ಕೆ: ಎಫ್‌ಐಎಚ್

ಹೊಸದಿಲ್ಲಿ, ನ.29: ಉತ್ತರಪ್ರದೇಶದಲ್ಲಿ ಈ ವರ್ಷ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪುರುಷರ ಜೂನಿಯರ್ ತಂಡ ಭಾಗವಹಿಸುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್) ಸೋಮವಾರ ತಿಳಿಸಿದೆ.
ಡಿ.8 ರಿಂದ 18ರ ತನಕ ನಡೆಯಲಿರುವ ಜೂನಿಯರ್ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಬದಲಿಗೆ ಮಲೇಷ್ಯಾದ ಜೂನಿಯರ್ ತಂಡ ಟೂರ್ನಿಯಲ್ಲಿ ಭಾಗವಹಿಸಲಿದೆ ಎಂದು ಎಫ್‌ಐಎಚ್ ತಿಳಿಸಿದೆ.
ಪಾಕಿಸ್ತಾನ ತಂಡ ಅಧಿಕೃತವಾಗಿ ಅರ್ಹತೆ ಪಡೆದಿದ್ದರೂ ಈ ವರ್ಷ ಉತ್ತರಪ್ರದೇಶದ ಲಕ್ನೋದಲ್ಲಿ ನಡೆಯುತ್ತಿರುವ ಹಾಕಿ ಜೂನಿಯರ್ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ಘೋಷಿಸಲು ಎಫ್‌ಐಎಚ್‌ಗೆ ಖೇದವಾಗುತ್ತಿದೆ. ಪಾಕಿಸ್ತಾನ ಹಾಕಿ ಫೆಡರೇಶನ್‌ನೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕ್ ತಂಡ ಸಾಕಷ್ಟು ತಯಾರಿಯನ್ನು ನಡೆಸಿತ್ತು. ಆದರೆ, ಆಟಗಾರರ ವೀಸಾಕ್ಕೆ ಅಧಿಕೃತ ಗಡುವಿನ ಬಳಿಕ ಅರ್ಜಿ ಸಲ್ಲಿಸಿತ್ತು.
ಹಲವು ಬಾರಿ ಪತ್ರಗಳನ್ನು ಬರೆದರೂ ಪಾಕ್ ಹಾಕಿ ಫೆಡರೇಶನ್ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಜೂನಿಯರ್ ವಿಶ್ವಕಪ್‌ನಲ್ಲಿ ಭಾಗವಹಿಸಲು ಅಸಹಾಯಕತೆ ವ್ಯಕ್ತಪಡಿಸಿದೆ ಎಂದು ಎಫ್‌ಐಎಚ್ ಹೇಳಿದೆ.





