ಪಾಕ್ ವಿರುದ್ಧ ನ್ಯೂಝಿಲೆಂಡ್‌ಗೆ ಐತಿಹಾಸಿಕ ಜಯ
30 ವರ್ಷಗಳ ಬಳಿಕ ಟೆಸ್ಟ್ ಸರಣಿ ಜಯಿಸಿದ ಕಿವೀಸ್

ಹ್ಯಾಮಿಲ್ಟನ್, ನ.29: ದ್ವಿತೀಯ ಟೆಸ್ಟ್‌ನ ಕೊನೆಯ ಅವಧಿಯ ನಾಟಕೀಯ ತಿರುವಿನಲ್ಲಿ ಪಾಕಿಸ್ತಾನದ 9 ವಿಕೆಟ್‌ಗಳನ್ನು ಉಡಾಯಿಸಿದ ನ್ಯೂಝಿಲೆಂಡ್ ತಂಡ 139 ರನ್‌ಗಳ ಅಂತರದಿಂದ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಕಿವೀಸ್ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ನ್ಯೂಝಿಲೆಂಡ್ 1985ರ ಬಳಿಕ ಪಾಕಿಸ್ತಾನದ ವಿರುದ್ಧ ಮೊದಲ ಬಾರಿ ಟೆಸ್ಟ್ ಸರಣಿ ಜಯಿಸಿದೆ.
ಪಾಕಿಸ್ತಾನಕ್ಕೆ ಗೆಲುವಿಗೆ 369 ರನ್ ಗಳಿಸಬೇಕಾಗಿತ್ತು. ಕೊನೆಯ ದಿನದಾಟವಾದ ಮಂಗಳವಾರ ಟೀ ವಿರಾಮದ ವೇಳೆ ಪಾಕ್ 1 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. ಆದರೆ, ದಿಢೀರ್ ಕುಸಿತ ಕಂಡ ಪಾಕ್ ಎರಡನೆ ಇನಿಂಗ್ಸ್‌ನಲ್ಲಿ 230 ರನ್‌ಗೆ ಆಲೌಟಾಯಿತು.
ಪಾಕ್ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದ ಸಮಿ ಅಸ್ಲಾಂ(91) ವಿಕೆಟ್ ಉಡಾಯಿಸಿದ ಟಿಮ್ ಸೌಥಿ ಕಿವೀಸ್‌ಗೆ ಮೇಲುಗೈ ಒದಗಿಸಿದರು. ಅಸ್ಲಾಂ ಔಟಾದ ಬಳಿಕ ಪಾಕ್‌ನ ಕೊನೆಯ 8 ವಿಕೆಟ್‌ಗಳು 49 ರನ್ ಗಳಿಸುವಷ್ಟರಲ್ಲಿ ಪತನಗೊಂಡವು. ನೀಲ್ ವಾಗ್ನರ್ 6 ಎಸೆತಗಳಲ್ಲಿ ಒಂದೂ ರನ್ ನೀಡದೇ ಕೊನೆಯ 3 ವಿಕೆಟ್ ಉರುಳಿಸಿದರು.
ಆರಂಭಿಕ ಆಟಗಾರರಾದ ಅಝರ್ ಅಲಿ(58 ರನ್, 161 ಎಸೆತ) ಹಾಗೂ ಸಮಿ ಅಸ್ಲಾಂ(91 ರನ್, 238 ಎಸೆತ) ಮೊದಲ ವಿಕೆಟ್‌ಗೆ 131 ರನ್ ಸೇರಿಸಿ ಪಾಕ್‌ಗೆ ಭದ್ರಬುನಾದಿ ಹಾಕಿಕೊಟ್ಟಿದ್ದರು. ಅಝರ್‌ರನ್ನು ಲೆಗ್-ಸ್ಪಿನ್ನರ್ ಸ್ಯಾಂಟ್ನರ್ ಕ್ಲೀನ್ ಬೌಲ್ಡ್ ಮಾಡಿದರು. ಅಝರ್ ಔಟಾದ ಬೆನ್ನಿಗೇ 16 ರನ್‌ಗೆ ಬಾಬರ್ ಆಝಂ ಔಟಾದರು.
ಸರ್ಫಾಝ್ ಅಹ್ಮದ್ 19 ರನ್‌ಗೆ ರನೌಟಾದರು. 39ನೆ ಜನ್ಮದಿನ ಆಚರಿಸಿಕೊಂಡ ಯೂನಿಸ್ ಖಾನ್ 11ರನ್ ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದರು. ಸೊಹೈಲ್ ಖಾನ್(8) ಕಾಲಿನ್ ಗ್ರಾಂಡ್‌ಹೊಮೆಗೆ ವಿಕೆಟ್ ಒಪ್ಪಿಸಿದರು. ಮುಹಮ್ಮದ್ ಆಮಿರ್, ವಹಾಬ್ ರಿಯಾಝ್ ಹಾಗೂ ಇಮ್ರಾನ್ ಖಾನ್ ಖಾತೆ ತೆರೆಯುವ ಮೊದಲೆ ಪೆವಿಲಿಯನ್‌ಗೆ ಕಳುಹಿಸಿದ ವಾಗ್ನರ್ ಪಾಕ್‌ಗೆ ಭಾರೀ ಆಘಾತ ನೀಡಿದರು.
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ್ನು ಜಯಿಸಿರುವ ನ್ಯೂಝಿಲೆಂಡ್ 2ನೆ ಟೆಸ್ಟ್‌ನ್ನು ಗೆಲ್ಲುವುದರೊಂದಿಗೆ ಸರಣಿ ವಶಪಡಿಸಿಕೊಂಡಿದೆ. ವಿಶ್ವ ರ್ಯಾಂಕಿಂಗ್‌ನಲ್ಲಿ 2ನೆ ಸ್ಥಾನದಲ್ಲಿದ್ದ ಪಾಕ್ 4ನೆ ಸ್ಥಾನಕ್ಕೆ ಕುಸಿದಿದೆ. ನ್ಯೂಝಿಲೆಂಡ್ 7ನೆ ಸ್ಥಾನ ಉಳಿಸಿಕೊಂಡಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 271
ಪಾಕಿಸ್ತಾನ ಪ್ರಥಮ ಇನಿಂಗ್ಸ್: 216
ನ್ಯೂಝಿಲೆಂಡ್ ಎರಡನೆ ಇನಿಂಗ್ಸ್: 313/5 ಡಿಕ್ಲೇರ್
ಪಾಕಿಸ್ತಾನ ದ್ವಿತೀಯ ಇನಿಂಗ್ಸ್: 230/10
(ಅಸ್ಲಂ 91, ಅಲಿ 58, ವಾಗ್ನರ್ 3-57, ಸೌಥಿ 2-60, ಸ್ಯಾಂಟ್ನರ್2-49)







