ಹಾಕಿ ಟೆಸ್ಟ್: ಭಾರತಕ್ಕೆ ರೋಚಕ ಜಯ
ಅವಳಿ ಗೋಲು ಬಾರಿಸಿದ ಅಫ್ಫಾನ್ ಯೂಸುಫ್

ಹೊಸದಿಲ್ಲಿ, ನ.29: ಮೊದಲಾರ್ಧದಲ್ಲಿ ಪ್ರತಿಭಾವಂತ ಯುವ ಆಟಗಾರ ಅಫ್ಫಾನ್ ಯೂಸುಫ್ ಬಾರಿಸಿದ ಅವಳಿ ಗೋಲು ಹಾಗೂ ನಾಯಕ ವಿ.ಆರ್. ರಘುನಾಥ್ ದಾಖಲಿಸಿದ ಏಕೈಕ ಗೋಲು ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿದೆ.
ವಿಕ್ಟೋರಿಯದಲ್ಲಿ ಬೆಂಡಿಗೊದಲ್ಲಿ ಮಂಗಳವಾರ ನಡೆದ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ವಿಶ್ವದ ನಂ.1 ಆಸ್ಟ್ರೇಲಿಯವನ್ನು ಸೋಲಿಸಿ ಮುನ್ನಡೆ ಸಾಧಿಸಿತು. ಆಸ್ಟ್ರೇಲಿಯ ವಿರುದ್ಧ ಈವರೆಗೆ ಆಡಿರುವ 117 ಪಂದ್ಯಗಳ ಪೈಕಿ 22ನೆ ಗೆಲುವು ದಾಖಲಿಸಿತು.
ನಾಲ್ಕು ರಾಷ್ಟ್ರಗಳ ಅಹ್ವಾನಿತ ಹಾಕಿ ಟೂರ್ನಮೆಂಟ್‌ನಲ್ಲಿ ಕಂಚಿನ ಪದಕ ಜಯಿಸಿದ ಮರುದಿನವೇ ಭಾರತ ತಂಡಕ್ಕೆ ಈ ಗೆಲುವು ಒಲಿದಿದೆ. ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಆಸ್ಟ್ರೇಲಿಯಕ್ಕೆ 2-3 ಅಂತರದಿಂದ ಸೋತಿದ್ದ ರಘುನಾಥ್ ನೇತೃತ್ವದ ಭಾರತ ತಂಡ ಇದೀಗ 3-2 ಅಂತರದಿಂದ ಜಯ ಸಾಧಿಸಿ ತಕ್ಕ ಸೇಡು ತೀರಿಸಿಕೊಂಡಿದೆ.
21ನೆ ನಿಮಿಷದಲ್ಲಿ ಎರಡು ಅದ್ಭುತ ಗೋಲು ಬಾರಿಸಿದ 22ರ ಹರೆಯದ ಅಫ್ಫಾನ್ ಭಾರತಕ್ಕೆ ಆರಂಭದಲ್ಲಿ 2-0 ಮುನ್ನಡೆ ಒದಗಿಸಿಕೊಟ್ಟರು. 36ನೆ ಹಾಗೂ 43ನೆ ನಿಮಿಷದಲ್ಲಿ ಗೋಲು ಬಾರಿಸಿದ ಮ್ಯಾಥ್ಯೂ ಮಿಲ್ಲಿಸ್ ಹಾಗೂ ಟ್ರೆಂಟ್ ಮಿಟ್ಟನ್ ಆಸ್ಟ್ರೇಲಿಯ ಗೋಲನ್ನು 2-2 ರಿಂದ ಸಮಬಲಗೊಳಿಸಲು ನೆರವಾದರು. 44ನೆ ನಿಮಿಷದಲ್ಲಿ ಗೋಲು ಬಾರಿಸಿದ ನಾಯಕ ರಘುನಾಥ್ ಭಾರತಕ್ಕೆ 3-2 ಅಂತರದ ರೋಚಕ ಜಯ ತಂದರು.
ಮಲೇಷ್ಯಾದಲ್ಲಿ ಪುರುಷರ ಏಷ್ಯನ್ ಚಾಂಪಿಯನ್ ಟ್ರೋಫಿ(ಎಸಿಟಿ)ಯಲ್ಲಿ ನಾಲ್ಕು ಗೋಲುಗಳನ್ನು ಬಾರಿಸಿದ್ದ ಯೂಸುಫ್ ಯಶಸ್ವಿ ಪ್ರದರ್ಶನ ಮುಂದುವರಿಸಿದರು.
ಉಭಯ ತಂಡಗಳು ಡಿ.1 ರಂದು ಎರಡನೆ ಟೆಸ್ಟ್ ಪಂದ್ಯವನ್ನು ಆಡಲಿವೆ.







