‘ಟೆಮ್ಸ್ ವರ್ಷದ ವ್ಯಕ್ತಿ’ ಸಮೀಕ್ಷೆಯಲ್ಲಿ ಮೋದಿ ಮುಂದು
ನ್ಯೂಯಾರ್ಕ್, ನ. 29: ‘ಟೈಮ್’ ಮ್ಯಾಗಝಿನ್‌ನ ‘ವರ್ಷದ ವ್ಯಕ್ತಿ 2016’ ಗೌರವಕ್ಕಾಗಿ ನಡೆದ ಓದುಗರ ಆನ್‌ಲೈನ್ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುನ್ನಡೆಯಲ್ಲಿದ್ದಾರೆ.
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂತಾದವರು ಸ್ಪರ್ಧೆಯಲ್ಲಿದ್ದಾರೆ.
‘ಟೈಮ್’ ಪತ್ರಿಕೆಯ ‘ವರ್ಷದ ವ್ಯಕ್ತಿ’ ಗೌರವದ ಸ್ಪರ್ಧೆಯಲ್ಲಿ ಮೋದಿ ನಾಲ್ಕು ವರ್ಷಗಳಿಂದ ನಿರಂತರವಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿನ ವರ್ಷ ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ನಮ್ಮ ಜಗತ್ತಿನ ಮೇಲೆ ಯಾರು ಹೆಚ್ಚು ಪ್ರಭಾವ ಬೀರಿದ್ದರು ಹಾಗೂ ಯಾರು ಹೆಚ್ಚು ಸುದ್ದಿಯಲ್ಲಿದ್ದರು ಎಂಬುದನ್ನು ಆಧರಿಸಿ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ಅಮೆರಿಕದ ಪತ್ರಿಕೆ ಪ್ರತಿ ವರ್ಷ ನೀಡುತ್ತದೆ. ವಿಶ್ವ ನಾಯಕರು, ಅಧ್ಯಕ್ಷರು, ಪ್ರತಿಭಟನಾಕಾರರು, ಗಗನಯಾನಿಗಳು, ಪಾಪ್ ಗಾಯಕರು ಮತ್ತು ವ್ಯವಸ್ಥೆಯನ್ನು ಹದಗೆಡಿಸಿದವರ ಪೈಕಿ ‘ವರ್ಷದ ವ್ಯಕ್ತಿ’ ಯಾರಾಗುತ್ತಾರೆ ಎಂಬ ಅಂತಿಮ ತೀರ್ಮಾನವನ್ನು ‘ಟೈಮ್’ ಪತ್ರಿಕೆಯ ಸಂಪಾದಕರು ತೆಗೆದುಕೊಳ್ಳುತ್ತಾರೆ ಹಾಗೂ ಈ ವಿಷಯದಲ್ಲಿ ಮತ ಹಾಕುವಂತೆ ತಮ್ಮ ಓದುಗರನ್ನೂ ಕೇಳುತ್ತಾರೆ.
21 ಶೇಕಡ ಮತಗಳನ್ನು ಪಡೆಯುವ ಮೂಲಕ ಮೋದಿ ಸ್ಪರ್ಧೆಯಲ್ಲಿ ಮುಂದಿದ್ದಾರೆ ಎಂದು ಆರಂಭಿಕ ಮಾಹಿತಿ ತಿಳಿಸಿದೆ. ವ್ಲ್ಯಾದಿಮಿರ್ ಪುಟಿನ್ 6 ಶೇ, ಒಬಾಮ 7 ಶೇ. ಮತ್ತು ಟ್ರಂಪ್ 6 ಶೇ. ಮತಗಳನ್ನು ಗಳಿಸಿದ್ದಾರೆ.





