ಕಾಶ್ಮೀರ : ಕರ್ಫ್ಯೂ ಸಂದರ್ಭ ಕರಾಟೆ ಕಲಿತ ಪೋರ ಈಗ ಏಷ್ಯನ್ ಚಾಂಪಿಯನ್

ಶ್ರೀನಗರ, ನ.30: ಹಿಜ್‌ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖಂಡ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದ ಹಿಂಸಾಚಾರ ನಿಯಂತ್ರಿಸುವ ಸಲುವಾಗಿ ಕರ್ಫ್ಯೂ ವಿಧಿಸಿದ್ದ ಪರಿಣಾಮ ನಾಲ್ಕು ತಿಂಗಳ ಕಾಲ ಶಾಲೆ- ಕಾಲೇಜುಗಳು ಕೂಡಾ ಮುಚ್ಚಿದ್ದವು. ಆದರೆ ಈ ಸಂದರ್ಭದಲ್ಲಿ ಏಳು ವರ್ಷದ ಪೋರ ಹಶೀಮ್ ಮನ್ಸೂರ್ ಸದುಪಯೋಗಪಡಿಸಿಕೊಂಡ. ಸ್ಥಳೀಯ ಕರಾಟೆ ಅಕಾಡಮಿಗೆ ಪ್ರತಿದಿನ ಭೇಟಿ ನೀಡಿ ಕರಾಟೆ ಕಲಿತ ಈ ಪೋರ ಇದೀಗ ಏಷ್ಯನ್ ಚಾಂಪಿಯನ್!
ಏಷ್ಯನ್ ಯುವ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಈ ಪೋರ ಇಡೀ ದೇಶ ಹೆಮ್ಮೆಪಡುವಂಥ ಸಾಧನೆ ಮಾಡಿದ್ದಾನೆ.
"ಶಾಲೆಗೆ ಹೋಗಲು ಇಲ್ಲದ ಕಾರಣ ನನಗೆ ಕರಾಟೆ ಅಭ್ಯಾಸಕ್ಕೆ ಸಾಕಷ್ಟು ಸಮಯಾವಕಾಶ ಸಿಕ್ಕಿತು. ತರಬೇತಿದಾರರ ಮಾರ್ಗದರ್ಶನದಲ್ಲಿ ಇಷ್ಟೊಂದು ಅಭ್ಯಾಸ ಮಾಡಲು ಸಮಯಾವಕಾಶ ಸಿಕ್ಕಿದ್ದು, ನನ್ನ ಪುಣ್ಯ" ಎಂದು ಬಾಲಕ ಉದ್ಗರಿಸುತ್ತಾನೆ.
ಬಂಡಿಪುರದಲ್ಲಿ ಪುಟ್ಟ ಕರಾಟೆ ಅಕಾಡಮಿ ನಡೆಸುತ್ತಿರುವ ತರಬೇತುದಾರ ಫೈಸಲ್ ಅಲಿ, ಈ ಪೋರನ ತರಬೇತಿಯನ್ನು ಪ್ರಾಯೋಜಿಸಿದ್ದರು. ಈ ಪ್ರದೇಶ ಬುರ್ಹಾನ್ ವಾನಿ ಹತ್ಯೆ ಬಳಿಕ ಅತ್ಯಂತ ಗಲಭೆಗ್ರಸ್ತ ಪ್ರದೇಶವಾಗಿತ್ತು.
ತರಬೇತುದಾರ ಫೈಸಲ್ ಅಲಿಯವರ ಬದ್ಧತೆ ಒಬ್ಬ ಅಲ್ಲ; ಇಬ್ಬರು ಚಾಂಪಿಯನ್ನರನ್ನು ಸೃಷ್ಟಿಸಿತು. ಎಂಟು ವರ್ಷದ ತಜಮುಲ್ ಇಸ್ಲಾಂ. ಇಟೆಲಿಯಲ್ಲಿ ನಡೆದ ವಿಶ್ವ ಕಿಕ್‌ಬಾಕ್ಸಿಂಗ್‌ನಲ್ಲಿ ಮೊದಲ ಸ್ಥಾನ ಗಳಿಸಿದ್ದ. ಈತ ಕೂಡಾ ಅಲಿ ಅವರಲ್ಲಿ ತರಬೇತಿ ಪಡೆದಿದ್ದ.







