ನಗ್ರೋಟಾದಲ್ಲಿ ಉಗ್ರರ ದಾಳಿ ; ಇಬ್ಬರು ಮೇಜರ್ ಸೇರಿದಂತೆ 7 ಮಂದಿ ಹುತಾತ್ಮ,

ಶ್ರೀನಗರ, ನ.30: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ಸೇನಾ ನೆಲೆ ಮೇಲೆ ಮಂಗಳವಾರ ದಾಳಿ ನಡೆಸಿದ ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತದ ಸೇನೆಯ ಇಬ್ಬರು ಮೇಜರ್ ಸೇರಿದಂತೆ 7 ಮಂದಿ ಯೋಧರು ಹುತಾತ್ಮರಾಗಿದ್ದಾರೆ.
ನಗ್ರೋಟಾ ಸೇನಾ ನೆಲೆಯ 166 ಫೀಲ್ಡ್ ರೆಜಿಮೆಂಟ್ ಮೇಲೆ ನಾಲ್ವರು ಉಗ್ರರು ದಾಳಿ ನಡೆಸಿದದ್ದರು. ಈ ಪೈಕಿ ಕಾರ್ಯಾಚರಣೆಯಲ್ಲಿ ಸೇನೆ 3 ಉಗ್ರರನ್ನು ಸಾಯಿಸಿದೆ. ಇನ್ನೊಬ್ಬನಿಗೆ ಶೋಧ ಕಾರ್ಯ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ (30) ಬೆಂಗಳೂರಿನ ಯಲಹಂಕದ ಗೇಟ್ ಗಾರ್ಡನ್ ನಿವಾಸಿ. ಇನ್ನೊಬ್ಬರು ಮಹಾರಾಷ್ಟ್ರದ ನಿವಾಸಿ ಮೇಜರ್ ಗೋಸಾವಿ ಕುನಲ್ ಮುನ್ನದಿರ್ ಅವರು ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಉಳಿದ ಯೋಧರ ವಿವರ ಲಭ್ಯವಾಗಲಿಲ್ಲ. ಎಂಟು ಮಂದಿ ಯೋಧರು ಗಾಯಗೊಂಡಿದ್ದಾರೆ
ಮೇಜರ್ ಅಕ್ಷಯ್ ಅವರ ತಂದೆ ಗಿರೀಶ್ ಜೆಟ್ ಏರ್‌ವೇಸ್‌ನಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಒತ್ತೆಯಾಳುಗಳಾಗುವಂತಹ ಸ್ಥಿತಿ ಎದುರಿಸುತ್ತಿದ್ದ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು, 12 ಯೋಧರು ಸೇರಿ ಒಟ್ಟು 16 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಗ್ರರು ಉರಿ ಮಾದರಿಯ ದಾಳಿ ಸಂಘಟಿಸಿದ್ದರು ಎಂದು ತಿಳಿದು ಬಂದಿದೆ.





