ನಭಾ ಜೈಲಿನಿಂದ ಪರಾರಿಯಾಗಿದ್ದ ಕೈದಿಗಳ ಪೈಕಿ ಇಬ್ಬರ ಬಂಧನ

ಹೊಸದಿಲ್ಲಿ, ನ. 30: ಪಂಜಾಬ್‌ನ ನಭಾ ಜೈನಿಂದ ಪರಾರಿಯಾಗಿದ್ದ ಕೈದಿಗಳ ಪೈಕಿ ಇಬ್ಬರನ್ನು ಇಂದು ಬಂಧಿಸಲಾಗಿದೆ.
ರಾಜಸ್ತಾನದ ಗಂಗಾನಗರದಲ್ಲಿ ಅವಿತಿದ್ದ ಇಬ್ಬರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ.
ರವಿವಾರ ಬೆಳಗ್ಗೆ ಪೊಲೀಸರ ಸಮವಸ್ತ್ರ ಧರಿಸಿ ಆಗಮಿಸಿದ್ದ 10 ಮಂದಿ ಶಸ್ತ್ರಾಸ್ತ್ರಧಾರಿಗಳು ಜೈಲಿನ ಒಳ ನುಗ್ಗಿ ನೂರು ಸುತ್ತು ಗುಂಡು ಹಾರಿಸಿ ಭಯದ ವಾತಾವರಣ ಸೃಷ್ಠಿಸಿದ್ದರು. ಬಂಧನದಲ್ಲಿದ್ದ ಖಲಿಸ್ತಾನ ವಿಮೋಚನಾ ದಳದ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ , ಗ್ಯಾಂಗ್ ಸ್ಟರ‍್ ಗಳಾಧ ಗುರ್ಪ್ರೀತ್ ಸಿಂಗ್, ವಿಕಿ, ಗೋಂಧ್ರಾ, ನಿತಿನ್ ಡಿಯೋಲ್ ಹಾಗೂ ವಿಕ್ರಮ ಜೀತ್ ಸಿಂಗ್ ವಿಕಿ ಎಂಬವರಿಗೆ ಪರಾರಿಯಾಗಲು ದುಷ್ಕರ್ಮಿಗಳು ನೆರವು ನೀಡಿದ್ದರು.
ಐವರು ಕೈದಿಗಳೊಂದಿಗೆ ಪರಾರಿಯಾಗಿದ್ದ ನಿಷೇಧಿತ ಉಗ್ರ ಸಂಘಟನೆ ಖಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮೀಂದರ್ ಸಿಂಗ್ ಮಿಂಟೂನನ್ನು ಸೋಮವಾರ ಪೊಲೀಸರು ಬಂಧಿಸಿದ್ದರು.
ಪ್ರಕರಣದ ತನಿಖೆ ನಡೆಸುತ್ತಿರುವ ಪಂಜಾಬ್ ಪೊಲೀಸರು ಒಟ್ಟು 29 ಮಂದಿಯ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದರು. ಘಟನೆಯ ಬಳಿಕ ಕರ್ತವ್ಯದಿಂದ ಅಮಾನುತುಗೊಂಡಿದ್ದ ಜೈಲು ಉಪ ಅಧೀಕ್ಷಕ ಭೀಮ್ ಸಿಂಗ್, ಜೈಲು ವಾರ್ಡನ್ ಜಗ್ ಮೀತ್ ಸಿಂಗ್ ಮತ್ತು ಉಗ್ರರಿಗೆ ನೆರವು ನೀಡಿದ ಆರೋಪ ಹೊತ್ತಿರುವ ಸಿಹಿತಿಂಡಿ ಅಂಗಡಿ ಮಾಲಕ ತೇಜಿಂದರ್ ಶರ್ಮಾ ಎಂಬವವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.





