ನ.8ರ ಪ್ರಧಾನಿ ಮೋದಿಯ ಭಾಷಣ ಮೊದಲೇ ರೆಕಾರ್ಡ್ ಆಗಿತ್ತು!
ಪ್ರಧಾನಿಯ ನೋಟು ಅಮಾನ್ಯ ಘೋಷಣೆ ಭಾಷಣದ ರಹಸ್ಯ ಬಿಚ್ಚಿಟ್ಟ ದೂರದರ್ಶನದ ಪತ್ರಕರ್ತ

ಹೊಸದಿಲ್ಲಿ, ನ.30: ಐನೂರು ಹಾಗೂ ಒಂದು ಸಾವಿರ ರೂ. ನೋಟು ಅಮಾನ್ಯ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ನ.8ರಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣ ನೇರಪ್ರಸಾರ ಅಲ್ಲ, ಅದು ಕೆಲವು ದಿನಗಳ ಹಿಂದೆ ರೆಕಾರ್ಡ್ ಮಾಡಿದ್ದ ವೀಡಿಯೊ ಆಗಿತ್ತು ಎಂದು ಸ್ಫೋಟಕ ವಿಷಯವನ್ನು ದೂರದರ್ಶನದ ಪತ್ರಕರ್ತ ಸತ್ಯೇಂದ್ರ ಮುರಳಿ ಬಹಿರಂಗಪಡಿಸಿದ್ದಾರೆ.
ನ.24ರಂದು ದಿಲ್ಲಿಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಎಂದು ‘ಕ್ಯಾಚ್‌ನ್ಯೂಸ್’ ಆನ್‌ಲೈನ್ ಪೋರ್ಟನ್ ವರದಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತ್ಯೇಂದ್ರ, ‘‘ನ.8ರಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ಕಾರ್ಯಕ್ರಮದ ವೀಡಿಯೊ ಮೊದಲೇ ರೆಕಾರ್ಡ್ ಮಾಡಲಾಗಿದ್ದು, ಅದು ಲೈವ್ ಟೆಲಿಕಾಸ್ಟ್ ಅಲ್ಲ. ಅದನ್ನು ಪ್ರಸಾರ ಮೊದಲು ಸಾಕಷ್ಟು ಎಡಿಟ್ ಮಾಡಲಾಗಿದೆ ಎಂಬುದಕ್ಕೆ ತನ್ನ ಬಳಿ ಸಾಕ್ಷಗಳಿವೆ. ಭಾಷಣದ ವೀಡಿಯೊವನ್ನು ನೇರಪ್ರಸಾರ ಎಂಬ ಟ್ಯಾಗ್‌ಲೈನ್ ಮೂಲಕವೇ ಪ್ರಸಾರ ಮಾಡುವಂತೆ ಸರಕಾರ ಸೂಚಿಸಿತ್ತು. ಸರಕಾರದ ನಿರ್ದೇಶನವನ್ನು ದೂರದರ್ಶನ ಸೇರಿದಂತೆ ಎಲ್ಲಾ ಖಾಸಗಿ ಚಾನೆಲ್‌ಗಳು ಪಾಲಿಸಿದವು ಎಂದು ಅವರು ತಿಳಿಸಿದ್ದಾರೆ. ಮೋದಿ ಭಾಷಣದ ವೀಡಿಯೊ ಫುಟೇಜ್, ಆಡಿಯೋ ಮತ್ತು ಇತರೆ ದಾಖಲೆಗಳನ್ನು ಆರ್‌ಟಿಇ ಮೂಲಕ ಪಡೆಯಲು ಎರಡು ವಾರ ಬೇಕಾಯಿತು. ಹಾಗಾಗಿ, ಈ ಬಗ್ಗೆ ಬಹಿರಂಗಪಡಿಸಲು ವಿಳಂಬವಾಯಿತು ಎಂದ ಅವರು, ಈ ಭಾಷಣದ ಕುರಿತಂತೆ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ಮೋದಿ ಭಾಷಣದ ನಿರ್ಧಾರ ಪ್ರಧಾನಿ ಕಾರ್ಯಾಲಯ ತೆಗೆದುಕೊಂಡಿತ್ತಾದರೂ, ಈ ಕುರಿತು ಉತ್ತರಿಸದ ಪಿಎಂಒ, ನನ್ನ ಆರ್‌ಟಿಎ ಅರ್ಜಿಯನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ವಿತ್ತ ಸಚಿವಾಲಯಗಳಿಗೆ ಕಳುಹಿಸಿತ್ತು ಎಂದು ಸತ್ಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ನೋಟುಗಳನ್ನು ಅಮಾನ್ಯಗೊಳಿಸುವಂತೆ ಆರ್‌ಬಿಐ ನ.8ರ ಸಂಜೆ 6 ಗಂಟೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ರಾತ್ರಿ 7 ಗಂಟೆಗೆ ಸಂಪುಟದ ಒಪ್ಪಿಗೆ ಸಿಕ್ಕಿತು’’ ಎಂಬ ಸರಕಾರದ ಹೇಳಿಕೆ ದೊಡ್ಡ ಬೋಗಸ್ ಎಂದು ಸತ್ಯೇಂದ್ರ ಹೇಳಿದ್ದಾರೆ.
ಈ ವಿಚಾರವನ್ನು ಬಹಿರಂಗಪಡಿಸಿದ ಬಳಿಕ ತನಗೆ ಹಲ್ಲೆ, ಕೊಲೆ ಮಾಡುವುದಾಗಿ, ಅಪಹರಿಸುವುದಾಗಿ ಬೆದರಿಕೆ ಕರೆಗಳು ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅವಹೇಳನ ಸಂದೇಶಗಳು ಬರುತ್ತಿವೆ ಎಂದು ಅವರು ತಿಳಿಸಿದರು.

ದೂರದರ್ಶನದ ಪತ್ರಕರ್ತ ಸತ್ಯೇಂದ್ರ ಮುರಳಿ







