ನೋಟು ನಿಷೇಧ:ಪ್ರತಿಪಕ್ಷಗಳ ಪ್ರತಿಭಟನೆ
ಲೋಕಸಭಾ ಕಲಾಪಕ್ಕೆ ವ್ಯತ್ಯಯ

ಹೊಸದಿಲ್ಲಿ,ನ.30: ಮತದಾನಕ್ಕೆ ಅವಕಾಶ ಕಲ್ಪಿಸುವ ಯಾವುದೇ ನಿಯಮದಡಿ ನೋಟು ನಿಷೇಧ ಕುರಿತು ಚರ್ಚೆಗೆ ತಾನು ಸಿದ್ಧವೆಂದು ಪ್ರತಿಪಕ್ಷವು ಬುಧವಾರ ಹೇಳಿತಾದರೂ, ಮತ ವಿಭಜನೆ ವಿರುದ್ಧದ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯಲು ಸರಕಾರವು ನಿರಾಕರಿಸಿತು. ಇದರೊಂದಿಗೆ ಸದನದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಆಗಾಗ್ಗೆ ಮುಂದೂಡಿಕೆಗಳಿಗೆ ಸಾಕ್ಷಿಯಾಯಿತು.
ಗದ್ದಲ,ಗಲಾಟೆಗಳಿಂದ ಕೂಡಿದ ಪ್ರತಿಭಟನೆಗಳಿಂದಾಗಿ ಎರಡು ಬಾರಿ ಸದನವನ್ನು ಮುಂದೂಡಿದ ಸ್ಪೀಕರ್ ಸುಮಿತ್ರಾ ಮಹಾಜನ ಅವರು ಅಂತಿಮವಾಗಿ ದಿನದ ಮಟ್ಟಿಗೆ ಮುಂದೂಡಿದರು.
ಬೆಳಿಗ್ಗೆ ಸದನವು ಸಮಾವೇಶಗೊಂಡಾಗ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗುತ್ತ ಸದನದ ಬಾವಿಯಲ್ಲಿ ನೆರೆದು ಮತದಾನಕ್ಕೆ ಅವಕಾಶ ಕಲ್ಪಿಸುವ ನಿಯಮದ ಅಡಿ ಚರ್ಚೆಗೆ ಆಗ್ರಹಿಸಿದರು. ಕೋಲಾಹಲ ಸೃಷ್ಟಿಯಾದಾಗ ಸ್ಪೀಕರ್ ಮಧ್ಯಾಹ್ನ 12 ಗಂಟೆಯವರೆಗೆ ಸದನವನ್ನು ಮುಂದೂಡಿದರು.
ಸದನವು ಮರು ಸಮಾವೇಶಗೊಂಡಾಗ ಮಲ್ಲಿಕಾರ್ಜುನ ಖರ್ಗೆ(ಕಾಂ) ಮತ್ತು ಸುದೀಪ್ ಬಂದೋಪಾಧ್ಯಾಯ(ಟಿಎಂಸಿ) ಸೇರಿದಂತೆ ಹಲವಾರು ಪ್ರತಿಪಕ್ಷಗಳ ನಾಯಕರು ನಿಲುವಳಿ ಸೂಚನೆಯನ್ನೊಳಗೊಂಡಿರುವ ನಿಯಮ 56ರಡಿ ಚರ್ಚೆ ನಡೆಯಬೇಕೆಂಬ ತಮ್ಮ ಬೇಡಿಕೆಯನ್ನು ಹಿಂದೆಗೆದುಕೊಳ್ಳುತ್ತೇವೆ ಮತ್ತು ಸರಕಾರವೂ ಮತದಾನಕ್ಕೆ ಅವಕಾಶ ಕಲ್ಪಿಸದ ನಿಯಮ 193ರಡಿ ಚರ್ಚೆಗೆ ಪಟ್ಟು ಹಿಡಿಯಬಾರದು ಎಂದು ಹೇಳಿದರು.
ಪ್ರತಿಪಕ್ಷದೊಂದಿಗೆ ಕೈಜೋಡಿಸಿದ ಬಿಜೆಡಿಯು ಮತ ವಿಭಜನೆ ಕಪ್ಪುಹಣ ಕುರಿತಲ್ಲ, ಅದು ನೋಟು ನಿಷೇಧದಿಂದಾಗಿ ಜನರು ಮತ್ತು ರಾಜ್ಯಗಳು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಎಂದು ಪ್ರತಿಪಾದಿಸಿತು.
ಚರ್ಚೆ ಮತ್ತು ಮತದಾನಕ್ಕೆ ಅವಕಾಶ ಕಲ್ಪಿಸುವ ಯಾವುದೇ ನಿಯಮದ ಬಗ್ಗೆ ನೀವೇ ನಿರ್ಧರಿಸಿ,ನಾವು ಸಿದ್ಧರಿದ್ದೇವೆ. ನಾವು ಚರ್ಚೆಯಿಂದ ದೂರ ಓಡುತ್ತಿಲ್ಲ ಎಂದು ಖರ್ಗೆ ಸ್ಪೀಕರ್‌ಗೆ ತಿಳಿಸಿದರು. ಬಂದೋಪಾಧ್ಯಾಯ ಅವರನ್ನು ಬೆಂಬಲಿಸಿದರು.
ಸರಕಾರದ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು, ಕಪ್ಪುಹಣದ ವಿರುದ್ಧ ಕ್ರಮಕ್ಕಾಗಿ ಜನರು ನರೇಂದ್ರ ಮೋದಿ ಸರಕಾರವನ್ನು ಬೆಂಬಲಿಸಿದ್ದಾರೆ ಮತ್ತು ಈ ವಿಷಯದಲ್ಲಿ ವಿಭಜಿತ ಸಂದೇಶ ಸಂಸತ್ತಿನಿಂದ ರವಾನೆಯಾಗಬಾರದು ಎಂದರು.
ಸಂಸತ್ತನ್ನು ಯಾರು ವಿಭಜಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಬಿಜೆಡಿ ನಾಯಕ ಭರ್ತೃಹರಿ ಮಹತಾಬ್ ಅವರು,ಪ್ರತಿಪಕ್ಷ ನಾಯಕರಾಗಲೀ ಟಿಎಂಸಿ ನಾಯಕರಾಗಲೀ ಸದನವನ್ನು ವಿಭಜಿಸುತ್ತಿಲ್ಲ. ನೋಟು ನಿಷೇಧದ ಬಳಿಕ ಜನರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಚರ್ಚೆಗೆ ನಾವು ಒತ್ತಾಯಿಸುತ್ತಿದ್ದೇವೆ ಎಂದರು. ತನ್ನ ಪಕ್ಷವು ನೋಟುನಿಷೇಧವನ್ನು ಬೆಂಬಲಿಸಿತ್ತು ಎಂದು ಅವರು ಬೆಟ್ಟು ಮಾಡಿದರು.
ಚರ್ಚೆಯು ಜನರು ಎದುರಿಸುತ್ತಿರುವ ಸಂಕಷ್ಟಗಳ ಕುರಿತಾಗಿದ್ದರೆ ಮತ ವಿಭಜನೆಯ ಅಗತ್ಯವಿಲ್ಲ ಮತ್ತು ಚರ್ಚೆಯು ತಕ್ಷಣವೇ ಆರಂಭವಾಗಬೇಕು ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಹೇಳಿದರು.
ಸರಕಾರದ ಸ್ಪಷ್ಟ ಉತ್ತರ ದೊರಕದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಸದಸ್ಯರು ತಮ್ಮ ಪ್ರತಿಭನೆಯನ್ನು ಮುಂದುವರಿಸಿದಾಗ ಸ್ಪೀಕರ್ ಅಪರಾಹ್ನ 12.45ರವರೆಗೆ ಕಲಾಪವನ್ನು ಮುಂದೂಡಿದರು. ಆ ಬಳಿಕವೂ ಪ್ರತಿಭಟನೆ ನಿಲ್ಲದಿದ್ದಾಗ ಅವರು ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.







