ನೋಟು ಸಮಸ್ಯೆ: ಆಸ್ತಿ ತೆರಿಗೆ ಹೆಚ್ಚಳ ಮಾಡದಂತೆ ಸದಸ್ಯರ ಮನವಿ
ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ
ಸುಳ್ಯ, ನ.30: ಸುಳ್ಯ ನಗರ ಪಂಚಾಯತ್‌ನ ಸಾಮಾನ್ಯ ಸಭೆಯು ಅಧ್ಯಕ್ಷೆ ಶೀಲಾವತಿ ಮಾಧವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರ ಪಂಚಾಯತ್ ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಮುಖ್ಯಾಧಿಕಾರಿ ಚಂದ್ರಕುಮಾರ್, ನೂತನ ಇಂಜಿನಿಯರ್ ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಆಸ್ತಿ ತೆರಿಗೆ ಹೆಚ್ಚಳ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು. ನೋಟು ರದ್ಧತಿಯ ಪರಿಣಾಮ ಜನರಿಗೆ ಕಷ್ಟ ಉಂಟಾಗಿದೆ. ಹೀಗಾಗಿ ಈ ಬಾರಿಗೆ ತೆರಿಗೆ ಹೆಚ್ಚಳ ಮಾಡಬಾರದು. ಇರುವ ತೆರಿಗೆಯನ್ನು ಸರಿಯಾಗಿ ವಸೂಲು ಮಾಡಬೇಕು. 2015-16ನೆ ಸಾಲಿನಲ್ಲಿ 70 ಲಕ್ಷ ತೆರಿಗೆ ಸಂಗ್ರಹವಾಗಿದ್ದು, 2016-17ನೆ ಸಾಲಿನಲ್ಲಿ 1.35 ಕೋಟಿ ಸಂಗ್ರಹವಾಗಬಹುದು. ಹೀಗಾಗಿ ತೆರಿಗೆ ಮತ್ತಷ್ಟು ಹೆಚ್ಚಳ ಮಾಡಿ ಜನರಿಗೆ ಹೊರೆ ಮಾಡಬಾರದು ಎಂದು ಪ್ರಕಾಶ್ ಹೆಗ್ಡೆ ಹೇಳಿದರು.
ಅಧ್ಯಕ್ಷೆ ಶೀಲಾವತಿ, ಸದಸ್ಯ ಗೋಪಾಲ ನಡುಬೈಲು ಮತ್ತಿತರರು ಇದೇ ಅಭಿಪ್ರಾಯ ವ್ಯಕ್ತಪಡಿಸಿದಾಗ ತೆರಿಗೆ ಹೆಚ್ಚಿಸುವುದು ಅನಿವಾರ್ಯ ಎಂದು ಮುಖ್ಯಾಧಿಕಾರಿ ಹೇಳಿದರು. ಸರಕಾರದ ಸುತ್ತೋಲೆಯನ್ನು ಬದಲಿಸಲು ಆಗುತ್ತದೆಯೇ ಎಂದು ಗೋಕುಲ್‌ದಾಸ್ ಪ್ರಶ್ನಿಸಿದರು. ತೆರಿಗೆ ಚರ್ಚೆಗೆ ವಿಶೇಷ ಸಬೆ ಕರೆಯಿರಿ ಎಂದು ಪ್ರಕಾಶ್ ಹೆಗ್ಡೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಇಂಜಿನಿಯರ್, ತೆರಿಗೆ ಹೆಚ್ಚಳ ಮಾಡದಿದ್ದರೆ ಮುಂದಿನ ವರ್ಷಗಳಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ಇರುವುದಕ್ಕಿಂತ ಸ್ಪಲ್ಪ ಪರ್ಸಂಟ್ ಹೆಚ್ಚಿಸಬಹುದು ಎಂದು ಕೆ.ಎಂ. ಮುಸ್ತಫಾ ಹೇಳಿದರು. ಅಂತಿಮವಾಗಿ ಶೇ.15ರಷ್ಟು ಹೆಚ್ಚಳ ಮಾಡುವುದೆಂದು ನಿರ್ಧರಿಸಲಾಯಿತು.
ನಗರದಲ್ಲಿ ಬಹಳಷ್ಟು ಅನಧಿಕೃತ ಕಟ್ಟಡಗಳಿವೆ. ಇವುಗಳಿಂದೆಲ್ಲಾ ದಂಡ ಸಮೇತ ತೆರಿಗೆ ವಸೂಲು ಮಾಡಬೇಕು ಎಂದು ಸದಸ್ಯರು ಹೇಳಿದರು. ಜನ ಈಗ ಕಷ್ಟದಲ್ಲಿ ಇರುವ ಕಾರಣ ತೆರಿಗೆ ವಸೂಲಾತಿಯನ್ನು ಎರಡು ತಿಂಗಳು ಮುಂದೂಡಬೇಕು ಎಂದು ಕೆ.ಎಂ. ಮುಸ್ತಫಾ ಹೇಳಿದರು.
ಸುಳ್ಯ ನಗರಕ್ಕೆ 68 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಯ ಪ್ರಸ್ತಾವನೆ ತಯಾರಿಸಲಾಗಿದೆ. ಇದನ್ನು ಫಾಲೋಆಪ್ ಮಾಡಿಲ್ಲ. ಇದನ್ನು ಯಾರು ಮಾಡಬೇಕಾದದ್ದು? ಸ್ಪಲ್ಪ ಶಾಸಕರು ಆಸಕ್ತಿ ವಹಿಸಬೇಕು ಎಂದು ಗೋಕುಲ್‌ದಾಸ್ ಹೇಳಿದರು. ಈ ಯೋಜನೆಯ ಬಗ್ಗೆ ಎರಡು ಬಾರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಜೆಟ್‌ನಲ್ಲಿ ಹಣ ಇಲ್ಲ ಎಂದು ವಾಪಸ್ ಬಂದಿದೆ. ಈ ಕುರಿತು ಆಡಳಿತ ಪಕ್ಷದವರು ಸ್ಪಲ್ಪಒತ್ತಡ ಹೇರಬೇಕು. ಶಾಸಕರು ಪ್ರಯತ್ನ ಮಾಡಿದ್ದಾರೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು. ಇಷ್ಟು ದೊಡ್ಡ ಮೊತ್ತದ ಯೋಜನೆಗೆ ಸ್ವಲ್ಪ ಶೇರ್ ಕಟ್ಟಬೇಕು. ಅದು ಸಕಾಲದಲ್ಲಿ ಕಟ್ಟಿಲ್ಲ ಹಾಗಾಗಿ ತಡವಾದದ್ದು ಎಂದು ಕೆ.ಎಂ. ಮುಸ್ತಫಾ ಹೇಳಿದರು. ಕೊಳವೆ ಬಾವಿ ಅಗತ್ಯ ಇರುವ ಕಡೆ ಬೇಗನೆ ಕೊರೆಯಬೇಕು. ನೀರಿನ ಸಮಸ್ಯೆ ಈಗಾಗಲೇ ಆರಂಭವಾಗಿದೆ ಎಂದು ಕೆ.ಎಸ್. ಉಮ್ಮರ್ ಹೇಳಿದರು.
ವಿವಿಧ ನಿಧಿಗಳಿಂದ ನಗರ ಪಂಚಾಯತ್ ಸದಸ್ಯರಿಗೆ ಹಂಚಲಾದ ಅನುದಾನದ ಕ್ರಿಯಾ ಯೋಜನೆ ತಯಾರಿಸುವಾಗ ಇಲ್ಲಿ ನಿರ್ಣಯಿಸಿದಂತೆ ನಿರ್ಣಯ ಬರೆಯಲಾಗಿಲ್ಲ ಎಂದು ಕೆ.ಎಸ್. ಉಮ್ಮರ್ ಆರೋಪಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು. ಹಳೆಯ ನಿರ್ಣಯವನ್ನು ತರಿಸಿ ಓದಲಾಯಿತು. ಬಳಿಕ ಇಂಜಿನಿಯರ್ ಈ ಕುರಿತಂತೆ ಸ್ಷಷ್ಟೀಕರಣ ನೀಡಿದರು. ನಗರ ಪಂಚಾಯತ್ ಕಚೇರಿಯಲ್ಲಿ ಸಲ್ಲಿಸಿದ ಅನೇಕ ಅರ್ಜಿಗಳು ಮಾಯವಾಗುತ್ತಿವೆ. ಈ ಕುರಿತಂತೆ ಗಂಭೀರ ಕ್ರಮ ತೆಗೆದುಕೊಳ್ಳಬೇಕೆಂದು ಪ್ರೇಮಾ ಟೀಚರ್, ಶಿವಕುಮಾರ್ ಮೊದಲಾದವರು ಗಮನ ಸೆಳೆದರು.
ಪಯಸ್ವಿನಿ ಹೊಳೆಯಲ್ಲಿ ವಿಷ ಪದಾರ್ಥಗಳನ್ನು ಹಾಕಿ ಮೀನು ಹಿಡಿಯುವುದನ್ನು ನಿಷೇಧಿಸಬೇಕೆಂದು ಪ್ರಕಾಶ್ ಹೆಗ್ಡೆ ಒತ್ತಾಯಿಸಿದರು. ಪಯಸ್ವಿನಿ ನದಿಗೆ ಕೊಳಚೆ ಬಿಡುವವರನ್ನೂ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.
ದುಗ್ಗಲಡ್ಕದ ಮೂಡೆಕಲ್ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಆಶ್ರಯ ಯೋಜನೆಯಲ್ಲಿ ಫಲಾನುಭವಿಗಳಿಗೆ ನೀಡಲು ನಿರ್ಣಯ ಕೈಗೊಳ್ಳುವ ವಿಚಾರ ಪ್ರಸ್ತಾಪವಾದಾಗ ಸದಸ್ಯ ಶಿವಕುಮಾರ್ ತೀವ್ರವಾಗಿ ಆಕ್ಷೇಪಿಸಿದರು. ಜಾಗವನ್ನು ಅಳತೆಮಾಡಿ ಮುಂದೆ ಈ ಕುರಿತು ತೀರ್ಮಾನ ಕೈಗೊಳ್ಳಬಹುದೆಂದು ಪ್ರಕಾಶ್ ಹೆಗ್ಡೆ ಹೇಳಿದಾಗ ಯಾವುದೇ ಕಾರಣಕ್ಕೂ ಸ್ಮಶಾನದ ಹೊರತು ಬೇರೆ ಉದ್ದೇಶಕ್ಕೆ ಜಾಗ ಬಳಸಬಾರದೆಂದು ಶಿವಕುಮಾರ್ ಹೇಳಿದರು. ತಾಂತ್ರಿಕವಾಗಿಯೂ ಇದಕ್ಕೆ ಅವಕಾಶವಿಲ್ಲ ಎಂದು ಇಂಜಿನಿಯರ್ ಶಿವಕುಮಾರ್ ಹೇಳುವುದರೊಂದಿಗೆ ಚರ್ಚೆ ಕೊನೆಗೊಂಡಿತು. ಅಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ರಸ್ತೆ ಅವ್ಯವಸ್ಥೆ ಕುರಿತಂತೆ ಕೆ.ಎಸ್. ಉಮ್ಮರ್ ಪ್ರಸ್ತಾಪಿಸಿದರು.
ಇಬ್ಬರು ಸದಸ್ಯರ ಕ್ಷೇತ್ರದಲ್ಲಿ ಆ ರಸ್ತೆ ಬರುತ್ತಿದ್ದರೂ, ಆ ಸದಸ್ಯರು ಅಲ್ಲಿ ನಯಾ ಪೈಸೆ ಅನುದಾನವಿರಿಸಿಲ್ಲವೆಂದು ಪ್ರಕಾಶ್ ಹೆಗ್ಡೆ ಹೇಳಿದಾಗ ಕೆರಳಿದ ಕೆ.ಎಂ.ಮುಸ್ತಾಫ ನೀವು ಅಧ್ಯಕ್ಷರಾಗಿದ್ದಾಗ ಆ ರಸ್ತೆ ನ.ಪಂ ವ್ಯಾಪ್ತಿಗೆ ಸೇರುವಂತದ್ದಲ್ಲ ಎಂದು ಹೇಳಿದ್ದೀರಿ. ನಿಮ್ಮ ವಾರ್ಡ್‌ಗೆ ಬರುವಾಗ ಅದನ್ನು ಮುಖ್ಯ ರಸ್ತೆ ಎಂದು ಹಣ ಇಡುತ್ತೀರಿ. ನಮ್ಮ ವಾರ್ಡ್‌ಗಳಿಗೆ ಬರುವಾಗ ಅದು ನಮಗೆ ಸಂಬಂಧಪಟ್ಟದಲ್ಲ ಎಂದು ಹೇಳುತ್ತೀರಿ ಎಂದು ಕೆಣಕಿದರು. ಆ ರಸ್ತೆಯ ಅಭಿವೃದ್ಧಿಗೆ ಸ್ವಲ್ಪ ಅನುದಾನ ಸಾಕಾಗುದಿಲ್ಲ. ಶಾಸಕರು ಮತ್ತು ಸಂಸದರು ಅನುದಾನ ನೀಡಬೇಕು ಎಂದು ಉಮ್ಮರ್ ಹೇಳಿದರು.
ಸುಳ್ಯ ನ.ಪಂ. ವ್ಯಾಪ್ತಿಯ 20 ಕಡೆಗಳಲ್ಲಿ ಬಯಲು ಮುಕ್ತ ಶೌಚಾಲಯದ ಸಾರ್ವಜನಿಕ ಮಾಹಿತಿ ಫಲಕಗಳನ್ನು ತಯಾರಿಸಿ ಅಳವಡಿಸಲು 1,45,000 ಬಿಲ್ ಆದ ಬಗ್ಗೆ ಸದಸ್ಯರು ಆಕ್ಷೇಪ ಸೂಚಿಸಿದರು. ಇದು ದುಬಾರಿ ವೆಚ್ಚ ಎಂದು ನಝೀರ್ ಆರೋಪಿಸಿದರೆ, ಇದರಲ್ಲಿ ಭ್ರಷ್ಟಚಾರ ನಡೆದಿದೆ ಎಂದು ಗೋಕುಲ್‌ದಾಸ್ ಆರೋಪಿಸಿದರು. ನಾಮಫಲಕ ಅಳವಡಿಕೆಯ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಸದಸ್ಯರು ಹೇಳಿದರು. ನನ್ನ ಗಮನಕ್ಕೂ ಬಂದಿಲ್ಲ ಎಂದು ಅಧ್ಯಕ್ಷರು ಹೇಳಿದರು.







