ಧರೆಗಪ್ಪಳಿಸಿದ ಚೀತಾ ಹೆಲಿಕಾಪ್ಟರ್ : ಮೂರು ಸೇನಾಧಿಕಾರಿಗಳ ದುರ್ಮರಣ
.jpeg)
ಕೋಲ್ಕತಾ, ನ.30: ಪಶ್ಚಿಮಬಂಗಾಲದ ಸಿಲಿಗುರಿ ಬಳಿಯ ಸುಕ್ನಾ ಎಂಬಲ್ಲಿ ಸೇನಾಪಡೆಯ ಚೀತಾ ಹೆಲಿಕಾಪ್ಟರ್ ಧರೆಗಪ್ಪಳಿಸಿದ ಪರಿಣಾಮ ಮೂವರು ಅಧಿಕಾರಿಗಳು ಮರಣ ಹೊಂದಿದ್ದು , ಓರ್ವ ಕಿರಿಯ ನಿಯುಕ್ತಾಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪರಾಹ್ನ ಸುಮಾರು 11.45ರ ವೇಳೆ ಈ ಅವಘಡ ಸಂಭವಿಸಿದೆ. ಚೀತಾ ಹೆಲಿಕಾಪ್ಟರ್‌ನಲ್ಲಿದ್ದ ಸೇನೆಯ ಉಡ್ಡಯನ ದಳದ ತುಕಡಿಯೊಂದು ಸುಕ್ನಾ ದಂಡು ಪ್ರದೇಶದ ವಾಯುನೆಲೆಯ ಹೆಲಿಪ್ಯಾಡ್‌ನಲ್ಲಿ ಇಳಿಯುವ ಸಂದರ್ಭ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಅಧಿಕಾರಿಗಳು ಸ್ಥಳದಲ್ಲೇ ಮರಣ ಹೊಂದಿದ್ದು ಓರ್ವ ಕಿರಿಯ ನಿಯುಕ್ತಾಧಿಕಾರಿಯನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೈಲಟ್‌ಗಳಾಗಿದ್ದ ಮೇಜರ್ ಸಂಜೀವ ಲಹರ್ ಮತ್ತು ಮೇಜರ್ ಅರವಿಂದ್ ಬಜಾಲಾ ಹಾಗೂ ಜೊತೆಗಿದ್ದ ಲೆ.ಕ. ರಜನೀಶ್ ಕುಮಾರ್ ಸಾವನ್ನಪ್ಪಿದ್ದಾರೆ. ಅಪಘಾತದ ಕಾರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಈ ಹೆಲಿಕಾಪ್ಟರ್ ಹಳೆಯದಾಗಿದ್ದು 10 ವರ್ಷದ ಹಿಂದೆಯೇ ಬದಲಾಯಿಸಲು ಉದ್ದೇಶಿಸಲಾಗಿತ್ತು. ಆದರೆ ಈ ಪ್ರಕ್ರಿಯೆ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.





