ಮೊಸುಲ್: 6.5 ಲಕ್ಷ ಜನರಿಗೆ ನೀರಿಲ್ಲ

ಸಾಂಧರ್ಭಿಕ ಚಿತ್ರ
ಮೊಸುಲ್ (ಇರಾಕ್), ನ. 30: ಇರಾಕ್ನ ಮೊಸುಲ್ ನಗರದಲ್ಲಿ ಸೇನೆ ಮತ್ತು ಐಸಿಸ್ ಭಯೋತ್ಪಾದಕರ ನಡುವೆ ನಡೆಯುತ್ತಿರುವ ಯುದ್ಧದ ವೇಳೆ ನೀರು ಪೂರೈಕೆ ಪೈಪ್ಲೈನ್ಗೆ ಹಾನಿಯಾಗಿದ್ದು, ನಗರದ 6.5 ಲಕ್ಷಕ್ಕೂ ಅಧಿಕ ಜನರಿಗೆ ನೀರು ಪೂರೈಕೆ ಕಡಿತಗೊಂಡಿದೆ.
‘‘ಹಾನಿಯಾದ ಪೈಪ್ಲೈನ್ ಯುದ್ಧ ನಡೆಯುತ್ತಿರುವ ಸ್ಥಳದಲ್ಲಿ ಇರುವುದರಿಂದ ಅಲ್ಲಿಗೆ ನಿರ್ವಹಣಾ ತಂಡ ತಲುಪಲು ಸಾಧ್ಯವಾಗುತ್ತಿಲ್ಲ’’ ಎಂದು ಮೊಸುಲ್ನ ನಿನವೇ ಪ್ರಾಂತೀಯ ಮಂಡಳಿಯ ಸದಸ್ಯ ಹುಸ್ಸಮ್ ಅಲ್-ಅಬರ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
ನಗರದ 15 ಜಿಲ್ಲೆಗಳು ಮತ್ತು ಉಪನಗರಗಳಲ್ಲಿ ನೀರು ಪೂರೈಕೆ ಸ್ಥಗಿತಗೊಂಡಿದೆ.
‘‘ನೀರು ಪೂರೈಕೆ ಸ್ಥಗಿತಗೊಂಡಿದ್ದು, ಭಾರೀ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ’’ ಎಂದು ಅಲ್-ಅಬರ್ ತಿಳಿಸಿದರು.
ಅಧಿಕಾರಿಗಳು ಈಗ ಸೇನೆಯ ನಿಯಂತ್ರಣದಲ್ಲಿರುವ ಪ್ರದೇಶಗಳಿಗೆ 70 ಟ್ಯಾಂಕ್ ನೀರು ಪೂರೈಸುತ್ತಿದ್ದಾರೆ. ಆದರೆ, ಇದು ಸಾಕಾಗುತ್ತಿಲ್ಲ. ಅದೂ ಅಲ್ಲದೆ, ಕೆಲವು ಟ್ಯಾಂಕರ್ಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದರು.
Next Story





