ಹಣದ ಬಿಕ್ಕಟ್ಟಿನಲ್ಲಿರುವ ಬ್ಯಾಂಕುಗಳಿಗೆ ಈ ವಾರ ದುಃಸ್ವಪ್ನ
ವೇತನದಾರರ ಹಣ ಹೇಗೆ ಮರಳಿಸುವುದು ಎನ್ನುವುದೇ ದೊಡ್ಡ ಚಿಂತೆ

ಹೊಸದಿಲ್ಲಿ,ನ.30: ಡಿಸೆಂಬರ್ ತಿಂಗಳು ಆರಂಭವಾಗುವುದರೊಂದಿಗೆ ತಮಗೆ ‘ಮಾರಿಹಬ್ಬ’ ಕಾದಿದೆ ಎಂಬ ಚಿಂತೆಯಿಂದ ಬ್ಯಾಂಕರ್‌ಗಳಿಗೆ ರಾತ್ರಿ ನಿದ್ರೆಯೇ ಬರುತ್ತಿಲ್ಲ. ತಿಂಗಳ ಮೊದಲ ವಾರದಿಂದ ಬ್ಯಾಂಕುಗಳು ಮತ್ತು ಗ್ರಾಹಕರಿಗೆ ದುಃಸ್ವಪ್ನಗಳ ಕಾಲ ಆರಂಭಗೊಳ್ಳಬಹುದು. ಮೊದಲೇ ಹಣದ ಕೊರತೆಯನ್ನೆದುರಿಸುತ್ತಿರುವ ಬ್ಯಾಂಕುಗಳಿಗೆ ತಮ್ಮ ವೇತನದ ಹಣವನ್ನು ಹಿಂಪಡೆಯಲು ಗ್ರಾಹಕರ ಸಂದಣಿ ಒಮ್ಮೆಲೇ ಹೆಚ್ಚುವ ನಿರೀಕ್ಷೆಯಿಂದ ಚಿಂತೆ ಮುಪ್ಪರಿಗೊಂಡಿದೆ.
ಅಸಂಘಟಿತ ಕ್ಷೇತ್ರ,ವಿಶೇಷವಾಗಿ ಮನೆಗೆಲಸದವರು,ವೃತ್ತ ಪತ್ರಿಕೆಗಳ ಮಾರಾಟ ಗಾರರು,ಹಾಲು ವ್ಯಾಪಾರಿಗಳಂತಹವರು ನಗದು ಕೊರತೆಯ ನೇರ ಪರಿಣಾಮವನ್ನು ಅನುಭವಿಸಲಿದ್ದಾರೆ. ಸರಕಾರ ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದ್ದರೂ ಈ ವರ್ಗದವರು ಇನ್ನಷ್ಟೇ ಅದಕ್ಕೆ ಅದಕ್ಕೆ ಪೂರ್ತಿಯಾಗಿ ತೆರೆದುಕೊಳ್ಳಬೇಕಿದೆ.ಬ್ಯಾಂಕುಗಳ ಮೂಲಕ ಸಂಬಳ ಪಡೆಯುವ ನೌಕರ ವರ್ಗ ಇಂತಹವರ ಮಾಸಿಕ ಬಿಲ್‌ಗಳ ಜೊತೆಗೆ ಬಾಡಿಗೆ,ಮಕ್ಕಳ ಶಾಲಾಶುಲ್ಕದಂತಹ ತಿಂಗಳ ಆರಂಭದಲ್ಲೇ ನೀಡಬೇಕಾದ ಮೊತ್ತಗಳನ್ನು ಪಾವತಿಸಲು ಪರದಾಡಲಿದ್ದಾರೆ.
ಪ್ರತಿ ತಿಂಗಳ ಆರಂಭದಲ್ಲಿ ಹೆಚ್ಚಿನ ನಗದು ಹಣಕ್ಕೆ ಬೇಡಿಕೆ ಮಾಮೂಲಾಗಿದ್ದರೂ ನೋಟು ನಿಷೇಧದ ಬಳಿಕ ಆರಂಭಗೊಂಡ ನಗದು ಕೊರತೆಯಿಂದಾಗಿ ದೇಶದಲ್ಲಿಯ ಹೆಚ್ಚಿನ ಜನರ ಸಹಜ ಜೀವನ ತೋಪೆದ್ದು ಹೋಗಿರುವ ನಡುವೆಯೇ ಇದು ಮೊದಲ ವೇತನ ಪಾವತಿಯಾಗಿರುವುದರಿಂದ ಈ ಬಾರಿ ಬ್ಯಾಂಕಿನವರು ವಿಭಿನ್ನ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.
ಎಲ್ಲ ಅಗತ್ಯಗಳ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆರ್‌ಬಿಐ ಮತ್ತು ಬ್ಯಾಂಕುಗಳಲ್ಲಿ ಸಾಕಷ್ಟು ನಗದು ಹಣವಿದೆ ಎಂದು ಅವರು ಭರವಸೆ ನೀಡುತ್ತಿದ್ದಾರೆ. ಆದರೆ ವಸ್ತುಸ್ಥಿತಿ ಈ ಭರವಸೆಗಳೆಲ್ಲವೂ ಪೊಳ್ಳು ಎನ್ನುವುದನ್ನು ಬೆಟ್ಟುಮಾಡುತ್ತಿದೆ. ಬ್ಯಾಂಕುಗಳಲ್ಲಾಗಲೀ ಎಟಿಎಂಗಳಲ್ಲಾಗಲೀ ಹಣವಿಲ್ಲ ಎನ್ನುವುದು ಯಾರೂ ಅಲ್ಲಗಳೆಯಲಾಗದ ಸತ್ಯ.
500 ಮತ್ತು 100 ರೂ.ನೋಟುಗಳ ಕೊರತೆ ಸಮಸ್ಯೆಯ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಬ್ಯಾಂಕುಗಳು 2,000 ರೂ.ನೋಟುಗಳನ್ನು ನೀಡಲು ಸಿದ್ಧವಿದ್ದರೂ, ಎಟಿಎಂಗಳು 2,000 ರೂ.ನೋಟುಗಳನ್ನು ತುಂಬಿಕೊಂಡಿದ್ದರೂ ಜನರು ಈ ನೋಟುಗಳನ್ನು ಪಡೆಯಲು ಸಿದ್ಧರಿಲ್ಲ. ಸಣ್ಣ ಮುಖಬೆಲೆಗಳ ನೋಟುಗಳಿಗೆ ಬೇಡಿಕೆ ಹೆಚ್ಚಿದೆ,ಆದರೆ ಅವುಗಳ ಪೂರೈಕೆ ಸಾಕಷ್ಟಿಲ್ಲ.
ಈಗ ಲಭ್ಯವಿರುವ ಸಣ್ಣ ಮುಖಬೆಲೆಗಳ ನೋಟುಗಳ ಪ್ರಮಾಣ ಬೇಡಿಕೆಯ ಶೇ.1ರಷ್ಟನ್ನೂ ಪೂರೈಸಲು ಸಾಕಾಗುವುದಿಲ್ಲ ಎನ್ನುವುದು ಬ್ಯಾಂಕ್ ಅಧಿಕಾರಿಯೋರ್ವರ ಅಭಿಪ್ರಾಯ.
ನಿಜಕ್ಕೂ ನಗದು ಹಣಕ್ಕೆ ಬೇಡಿಕೆ ತೀವ್ರಗೊಳ್ಳಲಿದೆ. ಸರಕಾರವು ನಗದುರಹಿತ ಆರ್ಥಿಕತೆಗೆ ಒತ್ತು ನೀಡುತ್ತಿದೆಯಾದರೂ ಅಸಂಘಟಿತ ಕ್ಷೇತ್ರದಲ್ಲಿ ಕೆಲವೇ ಜನರು ಡಿಜಿಟಲ್ ಹಣ ಪಾವತಿ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ ಎನ್ನುವುದು ವಾಸ್ತವ ಸಂಗತಿಯಾಗಿದೆ. ಉದಾಹರಣೆಗೆ ಮನೆಗೆಲಸದಾಳಿಗೆ ಪ್ರತಿ ತಿಂಗಳ ಆರಂಭದಲ್ಲಿ ವೇತನವನ್ನು ನಿಡಬೇಕಾಗುತ್ತದೆ ಮತ್ತು ಇದನ್ನು ನಗದಾಗಿಯೇ ಪಾವತಿಸಬೇಕಾಗುತ್ತದೆ. ಹಾಲು ಮಾರಾಟ ಮಾಡುವವರು, ವೃತ್ತ ಪತ್ರಿಕೆಗಳ ಮಾರಾಟಗಾರರು ಇತ್ಯಾದಿ ಜನರು ಇನ್ನೂ ಆನ್‌ಲೈನ್ ಆಗಿಲ್ಲ.
ನಗದು ಹಣದ ಬದಲು ಕಾರ್ಡ್‌ಗಳು,ಮೊಬೈಲ್ ಬ್ಯಾಂಕಿಂಗ್ ಇತ್ಯಾದಿಗಳನ್ನು ಬಳಸುವಂತೆ ಸರಕಾರ ಎಷ್ಟೇ ಒತ್ತಡ ಹೇರಿದರೂ ಇದು ರಾತ್ರೋರಾತ್ರಿ ಸಾಧ್ಯವಾಗುವ ಪವಾಡವೇನೂ ಅಲ್ಲ. ಚೋದ್ಯವೆಂದರ ಬ್ಯಾಂಕುಗಳ ಬಳಿ ಪ್ರತಿ ತಿಂಗಳ ಆರಂಭದಲ್ಲಿ ಜನರು ಎಷ್ಟು ಹಣವನ್ನು ತಮ್ಮ ಖಾತೆಗಳಿಂದ ವಾಪಸ್ ಪಡೆಯುತ್ತಾರೆ ಎಂಬ ದತ್ತಾಂಶಗಳೂ ಲಭ್ಯವಿಲ್ಲ.
ಸರಕಾರದ ಮಾಸಿಕ ವೇತನದ ಬಿಲ್ ನೋಡಿ ಅದರಿಂದ ತಿಂಗಳ ಅಂಕಿಅಂಶಗಳನ್ನು ಅಂದಾಜಿಸುವುದು ಇದಕ್ಕಿರುವ ಏಕೈಕ ಮಾರ್ಗವಾಗಿದೆ. ಇದರಲ್ಲಿ ಶೇ.70ರಷ್ಟನ್ನು ಸಾಮಾನ್ಯವಾಗಿ ಹಿಂಪಡೆಯಲಾಗುತ್ತದೆ ಮತ್ತು ಶೇ.30ರಷ್ಟು ಉಳಿತಾಯಕ್ಕೆ ಸೇರುತ್ತದೆ. ಆದರೆ ಇದು ಕೂಡ ಸರಕಾರಿ ನೌಕರರ ವೇತನ ಹಿಂಪಡೆಯುವಿಕೆಯ ಮೊತ್ತದ ಬಗ್ಗೆ ಮಾತ್ರ ಮಾಹಿತಿಯನ್ನು ನೀಡುತ್ತದೆಯೇ ಹೊರತು ಖಾಸಗಿ ಕ್ಷೇತ್ರಗಳ ನೌಕರರದ್ದಲ್ಲ ಎಂದು ಕೇರ್ ರೇಟಿಂಗ್‌ನ ಮದನ್ ಸಬ್ನವೀಸ್ ಅಭಿಪ್ರಾಯಿಸಿದ್ದಾರೆ.
ನೋಟು ನಿಷೇಧದ ಬಳಿಕ ಆಗಾಗ್ಗೆ ಬದಲಾಗುತ್ತಲೇ ಇರುವ ಸ್ಥಿತಿಯ ಬಗ್ಗೆ ಸರಕಾರ ಅಥವಾ ಆರ್‌ಬಿಐನಿಂದ ಇತ್ತೀಚಿನ ಮಾಹಿತಿಗಳ ಕೊರತೆ ಇನ್ನಷ್ಟು ಅಧ್ವಾನಕ್ಕೆ ಕಾರಣವಾಗಿದೆ. ಹೀಗಾಗಿಯೇ ನೋಟು ನಿಷೇಧವಾಗಿ 22 ದಿನಗಳು ಕಳೆದರೂ ನಿಜಕ್ಕೂ ಪ್ರಸಕ್ತ ಪರಿಸ್ಥಿತಿ ಏನು ಎಂಬ ಬಗ್ಗೆ ಸಾರ್ವಜನಿಕರಿಗೆ ಯಾವದೇ ಸುಳಿವು ಇಲ್ಲದೆ ಕಂಗಾಲಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರು ಹಾಡಿದ್ದೇ ಹಾಡು ಕಿಸಬಾಯಿದಾಸ ಎಂಬಂತೆ ಭಯೋತ್ಪಾದನೆಯ ನಿರ್ಮೂಲನದಿಂದ ಹಿಡಿದು ನಗದುರಹಿತ ಆರ್ಥಿಕತೆಯವರೆಗಿನ ಎಲ್ಲ ವಿಷಯಗಳ ಬಗ್ಗೆ ಪಿಟೀಲು ಕುಯ್ಯುತ್ತಲೇ ಇದ್ದಾರೆ. ಆದರೆ ವಾಸ್ತವದಲ್ಲಿ ಶ್ರೀಸಾಮಾನ್ಯನಿಗೆ ಗೊತ್ತಿರುವುದು ಒಂದೇ...ಅದು ಹಣದ ಕೊರತೆಯಿದೆ ಎನ್ನುವುದು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಘೋರವಾಗುವ ಬಗ್ಗೆ ಹೆಚ್ಚಿನ ಸಂಶಯ ಬೇಡ.







