ಇಂಗ್ಲೆಂಡ್ನ ಹಮೀದ್ನ 'ವಿರಾಟ ' ಬ್ಯಾಟಿಂಗ್ಗೆ ಕೊಹ್ಲಿ ಸ್ಫೂರ್ತಿ
ಗುಜರಾತ್ ಮೂಲದ ಕ್ರಿಕೆಟಿಗನಿಗೆ ತಂದೆಯೇ ಕೋಚ್

ಟೀಮ್ ಇಂಡಿಯಾ ನಾಯಕ ಕೊಹ್ಲಿ - ಹಮೀದ್
ಹೊಸದಿಲ್ಲಿ, ನ.30: ಹಸೀಬ್ ಹಮೀದ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಯುವ ಆರಂಭಿಕ ದಾಂಡಿಗ. ಅವರಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೂರ್ತಿಯಾಗಿದ್ದಾರೆ. ವಿರಾಟ್ ಕೊಹ್ಲಿಯನ್ನು ಭೇಟಿಯಾಗಿ ಬ್ಯಾಟಿಂಗ್ನ ಟಿಪ್ಸ್ ಪಡೆದಿದ್ದಾರೆ.
ಹಮೀದ್ ಕೈ ಬೆರಳಿಗೆ ಆಗಿರುವ ಗಾಯಕ್ಕೆ ಬ್ಯಾಂಡೇಜ್ ಸುತ್ತಿದ್ದರೂ, ಅದ್ಯಾವುದನ್ನು ಲೆಕ್ಕಿಸದೆ ಮೂರನೆ ಟೆಸ್ಟ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಪಾರು ಮಾಡಲು ಅವರು ಏಕಾಂಗಿ ಹೋರಾಟ ನಡೆಸಿದ್ದರು.
19ರ ಹರೆಯದ ಯುವ ದಾಂಡಿಗ ಹಮೀದ್ಗೆ ಏಕಾಂಗಿ ಹೋರಾಟಕ್ಕೆ ಕೊನೆಗೆ ಬೆಂಬಲ ನೀಡುವವರು ಯಾರೂ ಇರಲಿಲ್ಲ. ತಂಡ ಆಲೌಟಾದಾಗ ಹಮೀದ್ ಕ್ರೀಸ್ ಬಿಟ್ಟು ಪೆವಿಲಿಯನ್ಗೆ ವಾಪಸಾಗಿದ್ದರು. ಹಮೀದ್ಗೆ ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಆದರೆ ಅವರ ಹೋರಾಟವನ್ನು ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಇಂಗ್ಲೆಂಡ್ ಸೋತರೂ ತಂಡದ ಹೀರೊ ಆಗಿ ಅವರು ಮೂಡಿ ಬಂದಿದ್ದಾರೆ. ಲಂಕಾಶೈರ್ನ ಹಮೀದ್ ಅವರ ಕೈ ಬೆರಳಿಗೆ ಗಾಯವಾಗಿತ್ತು. ಈ ಕಾರಣದಿಂದಾಗಿ ಅವರು ಮೂರನೆ ಟೆಸ್ಟ್ನ ಎರಡನೆ ಇನಿಂಗ್ಸ್ನಲ್ಲಿ ಕುಕ್ ಜೊತೆ ಇನಿಂಗ್ಸ್ ಆರಂಭಿಸಲಿಲ್ಲ. ಆದರೆ 8ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕ್ರೀಸ್ಗೆ ಆಗಮಿಸಿದ್ದರು.
ಅವರು ಕ್ರೀಸ್ಗೆ ಆಗಮಿಸಿದಾಗ ಇಂಗ್ಲೆಂಡ್ನ ಸ್ಕೋರ್ 46.4 ಓವರ್ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 107 ಆಗಿತ್ತು. ಮುಂದೆ ಅವರು 170 ನಿಮಿಷಗಳ ಕಾಲ ಕ್ರೀಸ್ನಲ್ಲಿ ಬ್ಯಾಟಿಂಗ್ ನಡೆಸಿದರು. ತಂಡ ಆಲೌಟ್ ಆಗುವ ತನಕ ಕ್ರೀಸ್ ಬಿಡಲಿಲ್ಲ. ಮುಂದೆ 44 ಓವರ್ಗಳು ಮುಗಿಯುವ ತನಕ ಕ್ರೀಸ್ನಲ್ಲಿ ಸಹ ಆಟಗಾರರಿಗೆ ಬ್ಯಾಟಿಂಗ್ಗೆ ಸಾಥ್ ನೀಡಿದ್ದರು.
156 ಎಸೆತಗಳನ್ನು ಎದುರಿಸಿದ್ದ ಅವರು 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 59 ರನ್ ದಾಖಲಿಸಿದ್ದರು. 90.2ನೆ ಓವರ್ನಲ್ಲಿ ಎರಡು ರನ್ ಗಳಿಸುವ ಯತ್ನದಲ್ಲಿ ಆ್ಯಂಡರ್ಸನ್ಗೆ ಗುರಿ ತಲುಪಲು ಸಾಧ್ಯವಾಗಲಿಲ್ಲ, ಆ್ಯಂಡರ್ಸನ್ ಅವರನ್ನು ಅಶ್ವಿನ್ ಮತ್ತು ಜಡೇಜ ರನೌಟ್ ಮಾಡಿದ್ದರು. ಆಗ ಅಜೇಯರಾಗಿ ವಾಪಸಾಗುತ್ತಿದ್ದ ಹಮೀದ್ಗೆ ಭಾರತದ ಆಟಗಾರರು ಅಭಿನಂದನೆ ಸಲ್ಲಿಸಿದ್ದರು.
ಕುಕ್ಗೆ ಸಮರ್ಥ ಜೊತೆಗಾರ: ನಾಯಕ ಅಲಿಸ್ಟರ್ ಕುಕ್ ಕಳೆದ ನಾಲ್ಕು ವರ್ಷಗಳಿಂದ ಸಮರ್ಥ ಜೊತೆಗಾರನ ಹುಡುಕಾಟದಲ್ಲಿದ್ದರು. ಇದೀಗ ಅವರಿಗೆ ಯುವ ಆಟಗಾರ ಹಮೀದ್ ಸಿಕ್ಕಿದ್ದಾರೆ. 2012ರಲ್ಲಿ ಆ್ಯಂಡ್ರೋ ಸ್ಟ್ರಾಸ್ ನಿವೃತ್ತಿಯ ಬಳಿಕ ಕುಕ್ಗೆ ಇನಿಂಗ್ಸ್ ಆರಂಭಿಸಲು ಜೊತೆಗಾರ ಸಿಕ್ಕಿರಲಿಲ್ಲ. ಕೊನೆಗೂ ಅವರು ಜೊತೆಗಾರರನ್ನು ಕಂಡು ಕೊಂಡಿದ್ದಾರೆ.
ಚೊಚ್ಚಲ ಶತಕ ವಂಚಿತ ಹಮೀದ್ :ಭಾರತದ ವೇಗಿಗಳ ಮತ್ತು ಸ್ಪಿನ್ನರ್ಗಳ ದಾಳಿಯನ್ನು ಹಮೀದ್ ಸಮರ್ಥವಾಗಿ ಎದುರಿಸಿದ್ದಾರೆ. ರಾಜ್ಕೋಟ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಹಮೀದ್ ಮೊದಲ ಇನಿಂಗ್ಸ್ನಲ್ಲಿ 13 ರನ್ ಗಳಿಸಿದ್ದರು. ಎರಡನೆ ಇನಿಂಗ್ಸ್ನಲ್ಲಿ 82 ರನ್ ಗಳಿಸಿ ಔಟಾಗಿದ್ದರು. ಚೊಚ್ಚಲ ಶತಕ ಗಳಿಸುವ ಅವಕಾಶ ಕೈ ತಪ್ಪಿದ್ದರೂ, ಚೊಚ್ಚಲ ಅರ್ಧಶತಕ ದಾಖಲಿಸಿದ್ದರು.
ಎರಡನೆ ಟೆಸ್ಟ್ನಲ್ಲಿ 13 ಮತ್ತು 25 ರನ್, ಮೂರನೆ ಟೆಸ್ಟ್ನಲ್ಲಿ 9 ಮತ್ತು ಔಟಾಗದೆ 59 ರನ್ ಗಳಿಸುವ ಮೂಲಕ ಹಮೀದ್ ಮಿಂಚಿದ್ದಾರೆ. 3 ಟೆಸ್ಟ್ಗಳ 6 ಇನಿಂಗ್ಸ್ಗಳಲ್ಲಿ 43.80 ಸರಾಸರಿಯಂತೆ 219 ರನ್ ದಾಖಲಿಸಿದ್ದಾರೆ.
ತಂದೆಯೇ ಕೋಚ್: ಮೊಹಾಲಿಯಲ್ಲಿ ಹಮೀದ್ನ ಬ್ಯಾಟಿಂಗ್ ನೋಡಲು ಅವರ ತಂದೆ, ತಾಯಿ ,ಅಣ್ಣ ಆಗಮಿಸಿದ್ದರು. ತಂದೆ ಇಸ್ಮಾಯೀಲ್ ಅವರು ಹಮೀದ್ಗೆ ಕೋಚ್ ಆಗಿದ್ದಾರೆ. ಇಸ್ಮಾಯೀಲ್ ತನ್ನ ಮೂವರು ಗಂಡುಮಕ್ಕಳಲ್ಲಿ ಒಬ್ಬರಾದರೂ ಇಂಗ್ಲೆಂಡ್ ತಂಡದಲ್ಲಿ ಆಡುವಂತಾಗಲಿ ಎಂಬ ಕನಸು ಕನಸು ಕಾಣುತ್ತಿದ್ದರು. ಈ ಪೈಕಿ ಹಮೀದ್ ತಂದೆ ಕನಸನ್ನು ನನಸಾಗಿಸಿದ್ದಾರೆ.
ಇಸ್ಮಾಯೀಲ್ ಮೂಲತಃ ಗುಜರಾತ್ನ ಭರೂಚ್ನವರು. 1969ರಲ್ಲಿ ಉತ್ತಮ ಅವಕಾಶ ಅರಸಿ ಇಂಗ್ಲೆಂಡ್ಗೆ ಕುಟುಂಬ ಸಮೇತ ತೆರಳಿದ್ದರು. ಅಲ್ಲೇ ನೆಲೆ ಕಂಡು ಕೊಂಡಿದ್ದರು. ಮಕ್ಕಳಾದ ನೂಮಾನ್ , ಸಫ್ವಾನ್ ಮತ್ತು ಹಮೀದ್ಗೆ ಅವರು ಕ್ರಿಕೆಟ್ನ ಪಾಠ ಹೇಳಿಕೊಟ್ಟಿದ್ದರು. ‘‘ ತಂದೆಗೆ ನಮ್ಮಲ್ಲಿ ಒಬ್ಬನಾದರೂ ಇಂಗ್ಲೆಂಡ್ ತಂಡದಲ್ಲಿ ಆಡುವುದನ್ನು ನೋಡಬೇಕು ಎನ್ನುವುದು ಕನಸಾಗಿತ್ತು. ಅವರ ಬಳಿ ತರಬೇತಿ ಪಡೆದ ನನಗೆ ಮತ್ತು ಸಫ್ವಾನ್ಗೆ ಕ್ಲಬ್ ಕ್ರಿಕೆಟ್ ಹಂತವನ್ನು ದಾಟಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ಹಮೀದ್ ತಂದೆಯ ಕನಸನ್ನು ನನಸಾಗಿಸಿದ್ದಾರೆ’’ ಎಂದು ಹಮೀದ್ ಅವರ ಸಹೋದರ 30ರ ಹರೆಯದ ನೂಮಾನ್ ತಿಳಿಸಿದ್ದಾರೆ.
ಹಮೀದ್ ತವರಿಗೆ ವಾಪಸ್: ಕೈ ಬೆರಳಿಗೆ ಆಗಿರುವ ಗಾಯಕ್ಕೆ ಹಮೀದ್ ಶಸ್ತ್ರ ಚಿಕಿತ್ಸೆ ಅಗತ್ಯ. ಈ ಕಾರಣದಿಂದಾಗಿ ಅವರು ಮತ್ತೆ ತವರಿಗೆ ವಾಪಸಾಗಲಿದ್ದಾರೆ. ಇನ್ನುಳಿದ ಸರಣಿಯ ಎರಡು ಟೆಸ್ಟ್ಗಳಿಗೆ ಹಮೀದ್ ಇಲ್ಲ.
ಪ್ರತಿಭಾವಂತ ಆಟಗಾರ ಹಮೀದ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಟೀಮ್ ಇಂಡಿಯಾ ನಾಯಕ ಕೊಹ್ಲಿ ಅವರು ಹಮೀದ್ ಶೀಘ್ರ ಗುಣಮುಖರಾಗಿ ಇಂಗ್ಲೆಂಡ್ ತಂಡಕ್ಕೆ ವಾಪಸಾಗಲಿ ಎಂದು ಹಾರೈಸಿದ್ದಾರೆ.

ಮೊಹಾಲಿಯಲ್ಲಿ ಹಮೀದ್ನ ಬ್ಯಾಟಿಂಗ್ ನೋಡಲು ಆಗಮಿಸಿದ್ದ ಅವರ ತಂದೆ, ತಾಯಿ ,ಅಣ್ಣ







