ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಅನೂಪ್ ತೃತೀಯ
ಶಿವಮೊಗ್ಗ, ನ. 30: ಯೂರೋಪ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಜಿಲ್ಲೆಯ ಅನೂಪ್ ಆರ್. ಶೇಖರ್ ಪಾಲ್ಗೊಂಡು ತೃತೀಯ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ನಗರ ಕರಾಟೆ ಸಂಘದ ಅಧ್ಯಕ್ಷ ಎಸ್.ಎಲ್.ವಿನೋದ್ ತಿಳಿಸಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನ. 19 ರಂದು ಯೂರೋಪ್‌ನ ಸ್ಲೋವೇನಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಜಿಲ್ಲೆಯ ಅನೂಪ್ ಮತ್ತು ಗುಜರಾತ್‌ನ ನಿಖಿಲ್ ಮಕ್ವಾನ್ ದೇಶವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಾವಳಿಯಲ್ಲಿ ಅನೂಪ್ 17 ವರ್ಷ ವಯೋಮಿತಿಯ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು ಎಂದರು.
ಈ ವಿಭಾಗದಲ್ಲಿ ಸುಮಾರು 52 ವಿದ್ಯಾರ್ಥಿಗಳು ಇದ್ದು ಅದರಲ್ಲಿ 5 ದೇಶಗಳಾದ ಈಜಿಫ್ಟ್, ಪೋಲ್ಯಾಂಡ್, ಕ್ರೋಶಿಯಾ, ಆಸ್ಟ್ರಿಯಾ, ಇಟಲಿ ರಾಷ್ಟ್ರಗಳ ಬಲಿಷ್ಠ ಕ್ರೀಡಾ ಪಟುಗಳೊಂದಿಗೆ ಸ್ಪರ್ಧಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾನೆ ಎಂದರು.
ಈ ಪಂದ್ಯಾವಳಿಯಲ್ಲಿ 2 ನಿಮಿಷದಲ್ಲಿ 9 ಅಂಕವನ್ನು ಪಡೆಯುವ ಮೂಲಕ ಉತ್ತಮ ಫಲಿತಾಂಶದೊಂದಿಗೆ ವಿಜೇತನಾಗುವ ಮೂಲಕ, ಪೋಲ್ಯಾಂಡ್, ಕ್ರೋಶಿಯಾ, ಆಸ್ಟ್ರೀಯಾದ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿ ಸತತವಾಗಿ 7,4, 6, 8 ಅಂಕಗಳನ್ನು ಪಡೆದು ಮುನ್ನಡೆದು, 5ನೆಯ ಸುತ್ತಿನಲ್ಲಿ ಈಜಿಪ್ಟ್ ರಾಷ್ಟ್ರದ ಕರಾಟೆ ಪಟುವಿನೊಂದಿಗೆ ನಡೆದ ಪಂದ್ಯದಲ್ಲಿ ಟೆಲ್ಲರ್ 2 ನಿಮಿಷದಲ್ಲಿ 6 ಅಂಕವನ್ನು ಪಡೆದು ತೃತೀಯ ಸ್ಥಾನಗಳಿಸಿದ್ದಾನೆ. ಜಿಲ್ಲೆಗೆ ಹೆಮ್ಮೆ ತಂದ ಈತನಿಗೆ ನಗರ ಕರಾಟೆಸಂಘ 25 ಸಾವಿರ ರೂ. ನೀಡಿ ಗೌರವಿಸಿದೆ ಎಂದರು.
ಕರಾಟೆ ಪಟು ಅನೂಪ್ ಆರ್.ಶೇಖರ್ ಮಾತನಾಡಿ, ಪಂದ್ಯಾವಳಿಯಲ್ಲಿ ಅತ್ಯಂತ ವಿಶ್ವಾಸದಿಂದ ಭಾಗವಹಿಸಿದ್ದೆ. ಪ್ರಥಮ ಸ್ಥಾನ ಬರಬೇಕೆಂಬ ಆಸೆ ಇತ್ತಾದರೂ ತನಗಿಂತಲೂ ಬಲಿಷ್ಠವಾಗಿದ್ದ ವಿದೇಶಿ ಆಟಗಾರರೊಂದಿಗೆ ಸೆಣೆಸಾಡಬೇಕಾಯಿತು. ಪ್ರಥಮ ವಿದೇಶಿ ಪಂದ್ಯಾವಳಿ ಸಂತೋಷ ತಂದಿದೆ ಮತ್ತಷ್ಟು ಆತ್ಮವಿಶ್ವಾಸ ಮೂಡಿದೆ ಎಂದರು. ಗೋಷ್ಠಿಯಲ್ಲಿ ಪ್ರಮುಖರಾದ ಸುಧೀರ್, ನಾಗರಾಜ್, ಅನೂಪ್ ಮೊದಲಾದವರಿದ್ದರು.







