ಮಂಕಡ್ ಶತಕ ; ಕರ್ನಾಟಕದ ವಿರುದ್ಧ ಸೌರಾಷ್ಟ್ರ ಮೇಲುಗೈ

ಪಟಿಯಾಲ, ನ.30: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿದೆ.
ಪಟಿಯಾಲದ ಧ್ರುವ್ ಪಾಂಡೊವೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೆ ದಿನವಾಗಿರುವ ಇಂದು ಆಟ ನಿಂತಾಗ ಸೌರಾಷ್ಟ್ರ ತಂಡ 94 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 297 ರನ್ ಗಳಿಸಿದ್ದು, ಕರ್ನಾಟಕದ ವಿರುದ್ಧ 97 ರನ್‌ಗಳ ಮೇಲುಗೈ ಸಾಧಿಸಿದೆ.
ಆಟ ನಿಂತಾಗ 100 ರನ್ ಗಳಿಸಿರುವ ಪ್ರೇರಕ್ ಮಂಕಡ್ ಮತ್ತು 30 ರನ್ ಗಳಿಸಿರುವ ಕಮಲೇಶ್ ಮಕ್ವಾನಾ ಔಟಾಗದೆ ಕ್ರೀಸ್‌ನಲ್ಲಿದ್ದರು.
ಮೊದಲ ದಿನ 9 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 19 ರನ್ ಗಳಿಸಿದ್ದ ಸೌರಾಷ್ಟ್ರ ತಂಡ ಇಂದು ಚೇತರಿಸಿಕೊಂಡು ಕರ್ನಾಟಕ ತಂಡಕ್ಕೆ ತಿರುಗೇಟು ನೀಡಿದೆ. ನಿನ್ನೆ ಅಗ್ರ ಸರದಿಯ ಇಬ್ಬರು ದಾಂಡಿಗರಿಗೆ ಖಾತೆ ತೆರೆಯಲು ಅವಕಾಶ ನೀಡದೆ ಪೆವಿಲಿಯನ್ ಅಟ್ಟಿದ್ದ ವಿನಯ್ ಕುಮಾರ್ ಇಂದು ಮತ್ತೆ ಎರಡು ವಿಕೆಟ್‌ಗಳನ್ನು ಖಾತೆಗೆ ಸೇರಿಸಿಕೊಂಡರೂ, ಸೌರಾಷ್ಟ್ರ ತಂಡದ ಬ್ಯಾಟಿಂಗ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಸೌರಾಷ್ಟ್ರದ ಬ್ಯಾಟ್ಸ್‌ಮನ್ ಪ್ರೇರಕ್ ಮಂಕಡ್ ಚೊಚ್ಚಲ ಪ್ರಥಮ ದರ್ಜೆ ಶತಕ ದಾಖಲಿಸಿ ತಂಡಕ್ಕೆ ಮುನ್ನಡೆ ಸಾಧಿಸಲು ನೆರವಾದರು. ಆರಂಭಿಕ ದಾಂಡಿಗ ಸ್ನೆಲ್ ಪಟೇಲ್ ಜೊತೆ ಬ್ಯಾಟಿಂಗ್ ಮುಂದುವರಿಸಿದ ಶೆಲ್ಡಾನ್ ಜಾಕ್ಸನ್ (19) ಅವರಿಗೆ ಬೇಗನೆ ಪೆವಿಲಿಯನ್ ಹಾದಿ ತೋರಿಸಿದರು. ಬಳಿಕ ಕರ್ನಾಟಕದ ಬೌಲರ್‌ಗಳಿಗೆ ಸ್ನೇಹ್ಲೆ ಪಟೇಲ್ ಮತ್ತು ನಾಯಕ ಜಯದೇವ್ ಶಾಹ್ ಸವಾಲಾಗಿ ಪರಿಣಮಿಸಿದರು. ಇನ್ನೊಂದು ವಿಕೆಟ್ ಉಡಾಯಿಸಲು ವಿನಯ್ ಕುಮಾರ್ 108 ನಿಮಿಷಗಳ ಕಾಲ ಕಾಯಬೇಕಾಯಿತು. ಇವರು ನಾಲ್ಕನೆ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ನೀಡಿದರು. ತಂಡದ ಸ್ಕೋರ್‌ನ್ನು ಜೊತೆಯಾಗಿ 116ಕ್ಕೆ ತಲುಪಿಸಿದರು. 38.6ನೆ ಓವರ್‌ನಲ್ಲಿ ಜಯದೇವ್ ಶಾಹ್ (39) ಅವರನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ವಿನಯ್ ಕುಮಾರ್ ಯಶಸ್ವಿಯಾದರು. ಬಳಿಕ ಕ್ರೀಸ್‌ಗೆ ಆಗಮಿಸಿದ ಅರ್ಪಿತ್ ವಾಸ್ವಾಡ್ 13 ರನ್ ಗಳಿಸಿ ಕಾಝಿಗೆ ವಿಕೆಟ್ ಒಪ್ಪಿಸಿದರು.
ಆರನೆ ವಿಕೆಟ್‌ಗೆ ಪಟೇಲ್ ಮತ್ತು ಮಂಕಡ್ 57 ರನ್‌ಗಳ ಜೊತೆಯಾಟ ನೀಡಿದರು. 59.2ನೆ ಓವರ್‌ನಲ್ಲಿ ಪಟೇಲ್ ಅವರು ಅಬ್ರಾರ್ ಕಾಝಿ ಎಸೆತದಲ್ಲಿ ಕೆ. ಅಬ್ಬಾಸ್‌ಗೆ ಕ್ಯಾಚ್ ನೀಡಿದರು.ಪಟೇಲ್‌ಗೆ ಶತಕ ತಲುಪಲು ಸಾಧ್ಯವಾಗಲಿಲ್ಲ. ಪಟೇಲ್ 257 ನಿಮಿಷಗಳ ಬ್ಯಾಟಿಂಗ್‌ನಲ್ಲಿ 155 ಎಸೆತಗಳನ್ನು ಎದುರಿಸಿದರು. 13 ಬೌಂಡರಿಗಳ ಸಹಾಯದಿಂದ 87 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಏಳನೆ ವಿಕೆಟ್‌ಗೆ ಮಂಕಡ್ ಮತ್ತು ಮಕ್ವಾನಾ ಮುರಿಯದ ಜೊತೆಯಾಟದಲ್ಲಿ 101 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 297ಕ್ಕೆ ಏರಿಸಿ ಬ್ಯಾಟಿಂಗ್‌ನ್ನು ಮೂರನೆ ದಿನಕ್ಕೆ ಕಾಯ್ದಿರಿಸಿದ್ದಾರೆ.
ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ 43ಕ್ಕೆ 4 ಮತ್ತು ಅಬ್ರಾರ್ ಕಾಝಿ 66ಕ್ಕೆ 2 ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್ 200, ಸೌರಾಷ್ಟ್ರ ಮೊದಲ ಇನಿಂಗ್ಸ್ 94 ಓವರ್‌ಗಳಲ್ಲಿ 297/6( ಮಂಕಡ್ ಔಟಾಗದೆ 100, ಪಟೇಲ್ 87, ಶಾಹ್ 39, ಮಕ್ವಾನಾ ಔಟಾಗದೆ 30; ವಿನಯ್ ಕುಮಾರ್ 43ಕ್ಕೆ 4 ,ಅಬ್ರಾರ್ ಕಾಝಿ 66ಕ್ಕೆ 2 )







