ತಂಬಾಕು ಪದಾರ್ಥಗಳ ಉತ್ಪಾದನೆ, ಮಾರಾಟ ನಿಷೇಧ
ರಾಜ್ಯ ಆಹಾರ ಸುರಕ್ಷತಾ ಆಯುಕ್ತರಿಂದ ಆದೇಶ

ಶಿವಮೊಗ್ಗ, ನ. 30: ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ನಿಕೋಟಿನ್‌ಯುಕ್ತ ತಂಬಾಕು ಪದಾರ್ಥಗಳ ಉತ್ಪಾದನೆ, ಮಾರಾಟ, ವಿತರಣೆ ಮತ್ತು ಸಂಗ್ರಹವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಆ ಪ್ರಕಾರ ಜಿಲ್ಲೆಯಲ್ಲಿ ತಂಬಾಕುಯುಕ್ತ ಎಲ್ಲಾ ಪದಾರ್ಥಗಳನ್ನು ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ತಿಳಿಸಿದ್ದಾರೆ. ಬುಧವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 2013 ರ ಮೇ. ನಲ್ಲಿಯೇ ಗುಟ್ಕಾ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಆದರೂ ಹಿಂಬಾಗಿಲ ಮೂಲಕ ಮಾರಾಟ ಮಾಡಲಾಗುತ್ತಿದೆ. ತಂಬಾಕು ಮತ್ತು ಅದರ ಉಪ ಉತ್ಪನ್ನಗಳನ್ನು ನಿಷೇಧಿಸುವಂತೆ ಕೆಲವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನು ವಿಚಾರಣೆ ನಡೆಸಿದ ಕೋರ್ಟ್ 2016ರ ಮೇ 23ರಂದು ಎಲ್ಲಾ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ತಕ್ಷಣದಿಂದ ಅನ್ವಯವಾಗುವಂತೆ ತಂಬಾಕು ಮತ್ತು ಅದರ ಉಪ ಉತ್ಪನ್ನಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಈ ಪ್ರಕಾರ ಜಿಲ್ಲೆಯಲ್ಲಿ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಮಾಡಲಾಗಿದೆ. ಮಾರಾಟಗಾರರಿಗೆ, ಬಳಕೆದಾರರಿಗೆ ಹಾಗೂ ಸಂಗ್ರಹಾಕರರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಇದನ್ನೂ ಮೀರಿ ವರ್ತಿಸಿದಲ್ಲಿ ದಾಳಿ ನಡೆಸಿ, ವಶಪಡಿಸಿಕೊಂಡು ಕಾನೂನು ರೀತಿ ಕ್ರಮ ಜರಗಿಸಲಾಗುವುದು ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಸಮಿತಿಯನ್ನು ರಚಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠ, ಪಾಲಿಕೆ ಆಯುಕ್ತೆ, ಆರ್‌ಟಿಒ, ವಾಣಿಜ್ಯ ತೆರಿಗೆ ಅಧಿಕಾರಿ, ಕೈಗಾರಿಕಾ ಇಲಾಖೆಯ ಜಂಟೀ ನಿರ್ದೇಶಕ, ಎಪಿಎಂಸಿ ಉಪನಿರ್ದೇಶಕರು, ವಾರ್ತಾಧಿಕಾರಿ ಸದಸ್ಯರಾಗಿರುತ್ತಾರೆ. ಜಿಲ್ಲಾ ಆಹಾರ ಸುರಕ್ಷತಾಧಿಕಾರಿ ಕೃಷ್ಣಪ್ಪ ನೊಡಲ್ ಅಧಿಕಾರಿಯಾಗಿ ಇರುತ್ತಾರೆ ಎಂದು ವಿವರಿಸಿದರು.
ಸೆಕ್ಷನ್ 56, 57 ಮತ್ತು 58ರ ಪ್ರಕಾರ ಇದು ಶಿಕ್ಷಾರ್ಹ ಅಪರಾಧವಾಗಿದೆ. ಉತ್ಪಾದಕರಿಗೆ 10 ಲಕ್ಷ ರೂ. ವರೆಗೆ ದಂಡ ಮತ್ತು ಶಿಕ್ಷೆ ಎರಡನ್ನೂ ವಿಧಿಸಬಹುದಾಗಿದೆ. ಮಾರಾಟಗಾರರಿಗೆ 1 ಸಾವಿರ ರೂ. ದಂಡ ಮತ್ತು ಎರಡು ತಿಂಗಳ ಶಿಕ್ಷೆ ವಿಧಿಸಬಹುದಾಗಿದೆ. ದಂಡ ಹಾಕಲು ಮತ್ತು ದೂರು ದಾಖಲಿಸುವ ಅಧಿಕಾರ ಪೊಲೀಸರಿಗೂ ಇದೆ. ಸಮಿತಿಯವರು ದಾಳಿ ಸಂದಭರ್ದಲ್ಲಿ ಪಾಲ್ಗೊಂಡು ದೂರು ದಾಖಲಿಸಬಹುದಾಗಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆಹಾರ ಸುರಕ್ಷತಾಧಿಕಾರಿ ಕೆ. ಕೃಷ್ಣಪ್ಪ, ಸಹಾಯಕ ಅಧಿಕಾರಿ ವಿಶ್ವನಾಥ, ಪಾಲಿಕೆ ಆಯುಕ್ತೆ ತುಷಾರಾಮಣಿ ಉಪಸ್ಥಿತರಿದ್ದರು.







