ಬಾಲ ಕಾರ್ಮಿಕರ ರಕ್ಷಣಾ ಅಧಿಕಾರಿಗಳ ದಾಳಿ
ಮಂಡಕ್ಕಿ ,ಅವಲಕ್ಕಿ ಭಟ್ಟಿಗಳಲ್ಲಿ ದುಡಿಯುತ್ತಿದ್ದ 15 ಮಕ್ಕಳ ರಕ್ಷಣೆ
.jpg)
ದಾವಣಗೆರೆ, ನ.30:ಜಿಲ್ಲಾಧಿಕಾರಿಗಳ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ, ಸಾರ್ವಜನಿಕ ಶಿಕ್ಷಣ, ನಗರಾಭಿವೃದ್ಧಿ, ಸಮಾಜಕಲ್ಯಾಣ ಹಾಗೂ ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ 4 ತಂಡಗಳನ್ನು ರಚಿಸಿಕೊಂಡು ಅಧಿಕಾರಿಗಳು ದಾಳಿ ನಡೆಸಿದರು.
ಬಾಷಾ ನಗರ, ಆಝಾದ್‌ನಗರ ಹಾಗೂ ಮಾಗನಹಳ್ಳಿ ರಸ್ತೆಯ ಮಂಡಕ್ಕಿ ಭಟ್ಟಿ ಹಾಗೂ ಅವಲಕ್ಕಿ ಭಟ್ಟಿಗಳಿಗೆ ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ದಾಳಿ ನಡೆಸಲಾಯಿತು. ದಾಳಿಯಲ್ಲಿ ಪತ್ತೆಹಚ್ಚಲಾದ 15 ಮಕ್ಕಳಲ್ಲಿ 11 ಗಂಡು ಹಾಗೂ 4 ಹೆಣ್ಣು ಮಕ್ಕಳಿದ್ದು, ಅವರಲ್ಲಿ 8 ಮಕ್ಕಳು ಅವಲಕ್ಕಿ ಭಟ್ಟಿಗಳಲ್ಲಿ, 4 ಮಕ್ಕಳು ಮಂಡಕ್ಕಿ ಭಟ್ಟಿಗಳಲ್ಲಿ, 1 ಮಗು ಚಿಪ್ಸ್ ಅಂಗಡಿ ಹಾಗೂ ಇನ್ನೋರ್ವ ಮಗು ಈರುಳ್ಳಿ ವ್ಯಾಪಾರಿ ಕೆಲಸಕ್ಕೆ ನಿಯೋಜಿಸಲಾಗಿತ್ತು.
ಈ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಪುನರ್ವಸತಿ ಹಾಗೂ ಮುಂದಿನ ಕ್ರಮಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಗಿದೆ. ಮಕ್ಕಳ ವಯಸ್ಸಿನ ಬಗ್ಗೆ ವೈದ್ಯರಿಂದ ದೃಢೀಕರಣ ಪಡೆದುಕೊಂಡು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರಕರಣಗಳಲ್ಲಿ ಅವರನ್ನು ಕೆಲಸಕ್ಕೆ ನಿಯೋಜಿಸಿದ ಮಾಲಕರ ವಿರುದ್ಧ ನಿಯಮಾನುಸಾರ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಗೆ ತೆರಳಬೇಕಿದ್ದ ಮಕ್ಕಳನ್ನು ದುಡಿಮೆಯತ್ತ ದೂಡಲಾಗಿದೆ. ಈ ಬಗ್ಗೆ ಭಟ್ಟಿಗಳ ಮಾಲಕರಿಗೆ ಹಾಗೂ ಪೋಷಕರಿಗೆ ಸೂಚನೆ ನೀಡಿದ್ದು, ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆ ಬಿಡಿಸಿ ದುಡಿಮೆತ್ತ ದೂಡಬಾರದು ಎಂದು ಸೂಚಿಸಲಾಗಿದೆ. ಅಲ್ಲದೆ,ಭಟ್ಟಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ಹಿರೇಗೌಡರ್ ತಿಳಿಸಿದ್ದಾರೆ.







