ಕಾಶ್ಮೀರದ ಪೋರನಿಗೆ ಏಷ್ಯನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ

ಶ್ರೀನಗರ, ನ.30: ಜಮ್ಮು-ಕಾಶ್ಮೀರದ ಬಂಡಿಪೊರ ಜಿಲ್ಲೆಯ ಆರರ ಹರೆಯದ ಬಾಲಕ ಹಾಶಿಮ್ ಮನ್ಸೂರ್ ಏಷ್ಯನ್ ಯೂತ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಚಾಂಪಿಯನ್‌ಶಿಪ್‌ನ ಸಬ್-ಜೂನಿಯರ್ ವಿಭಾಗದಲ್ಲಿ ಮನ್ಸೂರ್ ಭಾರತವನ್ನು ಪ್ರತಿನಿಧಿಸಿದ್ದರು. ಚಾಂಪಿಯನ್‌ಶಿಪ್‌ನಲ್ಲಿ ಇತರ 19 ದೇಶಗಳು ಭಾಗವಹಿಸಿದ್ದವು.
ಮನ್ಸೂರ್ ಸಬ್-ಜೂನಿಯರ್ ವಿಭಾಗದಲ್ಲಿ ಕಾಶ್ಮೀರದ ಕೀರ್ತಿ ಪತಾಕೆ ಹಾರಿಸಿದ ಎರಡನೆ ಕಿರಿಯ ಕರಾಟೆ ಪಟು ಎನಿಸಿಕೊಂಡಿದ್ದಾರೆ. ಕಳೆದ ತಿಂಗಳು 8ರ ಹರೆಯದ ಬಾಲಕಿ ತಜಮುಲ್ ಇಸ್ಲಾಂ ಇಟಲಿಯಲ್ಲಿ ನಡೆದಿದ್ದ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಇಸ್ಲಾಂ ಹಾಗೂ ಮನ್ಸೂರ್ ಇಬ್ಬರಿಗೂ ಕೋಚ್ ಫೈಸಲ್ ಅಲಿ ತರಬೇತಿ ನೀಡುತ್ತಿದ್ದಾರೆ.
ಮನ್ಸೂರ್ ಚಾಂಪಿಯನ್‌ಶಿಪ್ ಆಯೋಜಕರಿಂದ ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಸ್ವೀಕರಿಸಿದ್ದಾರೆ. ಚಾಂಪಿಯನ್‌ಶಿಪ್‌ನ್ನು ಅಖಿಲ ಭಾರತ ಯೂತ್ ಕರಾಟೆ ಫೆಡರೇಶನ್ ಆಯೋಜಿಸಿತ್ತು.
ಚಿಕ್ಕ ಹಳ್ಳಿಯೊಂದರಲ್ಲಿ ಅಲಿ ನಡೆಸುತ್ತಿರುವ ಚಿಕ್ಕದಾದ ಕರಾಟೆ ಅಕಾಡಮಿಯಲ್ಲಿ ಒಂದು ವರ್ಷದ ಹಿಂದೆ ಮನ್ಸೂರ್ ತರಬೇತಿಯನ್ನು ಆರಂಭಿಸಿದ್ದರು. ಮನ್ಸೂರ್ ಪ್ರಸ್ತುತ 3ನೆ ತರಗತಿಯಲ್ಲಿ ಓದುತ್ತಿದ್ದಾರೆ.





