ಮಕಾವು ಓಪನ್: ಸೈನಾಗೆ ಪ್ರಯಾಸದ ಜಯ, ಕಶ್ಯಪ್ ಪ್ರಿ-ಕ್ವಾರ್ಟರ್‌ಗೆ

ಮಕಾವು, ನ.30: ಮಕಾವು ಓಪನ್ ಗ್ರಾನ್‌ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಇಂಡೋನೇಷ್ಯದ ಹನ್ನಾ ರಮಾದಿನಿ ವಿರುದ್ಧ ಪ್ರಯಾಸದ ಜಯ ಸಾಧಿಸಿದ್ದಾರೆ.
ಬುಧವಾರ ಇಲ್ಲಿ ಆರಂಭವಾದ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.11ನೆ ಆಟಗಾರ್ತಿ ಸೈನಾ ಅವರು ವಿಶ್ವದ ನಂ.44ನೆ ಆಟಗಾರ್ತಿ ರಮಾದಿನಿ ಅವರನ್ನು 21-23, 21-14, 21-18 ಗೇಮ್‌ಗಳ ಅಂತರದಿಂದ ಮಣಿಸಿ ಎರಡನೆ ಸುತ್ತಿಗೆ ತೇರ್ಗಡೆಯಾದರು.
ಕಶ್ಯಪ್ ಪ್ರಿ-ಕ್ವಾರ್ಟರ್ ಫೈನಲ್‌ಗೆ: ಪುರುಷರ ಸಿಂಗಲ್ಸ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ, ಹಾಂಕಾಂಗ್ ಓಪನ್ ಸೂಪರ್ ಸರಣಿಯಲಿ ಫೈನಲ್‌ಗೆ ತಲುಪಿದ್ದ ಸಮೀರ್ ವರ್ಮ ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದಿದ್ದಾರೆ.
ಕಶ್ಯಪ್ ಚೈನೀಸ್ ತೈಪೆಯ ಚುನ್-ವೀ ಚೆನ್‌ರನ್ನು 21-19, 21-8 ಗೇಮ್ ಗಳ ಅಂತರದಿಂದ ಮಣಿಸಿದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಕಶ್ಯಪ್ ಡೆನ್ಮಾರ್ಕ್ ಓಪನ್‌ನ ಬಳಿಕ ವಿಶ್ರಾಂತಿ ಪಡೆದುಕೊಂಡಿದ್ದರು. ಕಶ್ಯಪ್ ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಲಿನ್ ಯೂ ಸಿಯೆನ್‌ರನ್ನು ಎದುರಿಸಲಿದ್ದಾರೆ.
ಕಳೆದ ವಾರ ಹಾಂಕಾಂಗ್ ಓಪನ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯುವ ಆಟಗಾರ ಸಮೀರ್ ಇಂಡೋನೇಷ್ಯದ ಮುಹಮ್ಮದ್ ವಿರುದ್ಧ 18-21, 13-21 ಅಂತರದಿಂದ ಸೋತು ಟೂರ್ನಿಯಿಂದ ಹೊರ ನಡೆದರು.
ಮೂರನೆ ಶ್ರೇಯಾಂಕದ ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಹಾಂಕಾಂಗ್‌ನ ಚಾನ್ ಅಲನ್ ಯೂನ್ ಲಂಗ್ ಹಾಗೂ ಲಿ ಕುಯೆನ್ ಹಾನ್‌ರನ್ನು 21-11, 17-21, 21-9 ಗೇಮ್‌ಗಳ ಅಂತರದಿಂದ ಮಣಿಸಿದರು.







