ಹಾಕಿ ಟೆಸ್ಟ್: ಭಾರತ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ
ಹೊಸದಿಲ್ಲಿ, ನ.30: ಭಾರತೀಯ ಪುರುಷರ ಹಾಕಿ ತಂಡ ವಿಶ್ವದ ನಂ.1 ತಂಡ ಆಸ್ಟ್ರೇಲಿಯ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸುವ ಐತಿಹಾಸಿಕ ಅವಕಾಶವನ್ನು ಕೂದಲೆಳೆ ಅಂತರದಿಂದ ಕಳೆದುಕೊಂಡಿದೆ.
ವಿಕ್ಟೋರಿಯದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ದ್ವಿತೀಯಾರ್ಧದಲ್ಲಿ ಜೆಝ್ ಹೇವಾರ್ಡ್ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಆಸ್ಟ್ರೇಲಿಯ ತಂಡ 4-3 ಅಂತರದಿಂದ ಜಯ ಸಾಧಿಸಿ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.
13ನೆ, 23ನೆ, 38ನೆ ಹಾಗೂ 51ನೆ ನಿಮಿಷದಲ್ಲಿ ಗೋಲು ಬಾರಿಸಿದ ಆತಿಥೇಯ ಆಸ್ಟ್ರೇಲಿಯ ತಂಡ ಆರನೆ ರ್ಯಾಂಕಿನ ಭಾರತ ವಿರುದ್ಧ ಪ್ರಬಲ ಹೋರಾಟ ನೀಡಿತು.
ಇತ್ತೀಚೆಗೆ ಮೆಲ್ಬೋರ್ನ್‌ನಲ್ಲಿ ನಡೆದಿದ್ದ ನಾಲ್ಕು ರಾಷ್ಟ್ರಗಳ ಆಹ್ವಾನಿತ ಟೂರ್ನಿಯಲ್ಲಿ ಆಸ್ಟ್ರೇಲಿಯ ವಿರುದ್ಧ 3-2 ಅಂತರದಿಂದ ಸೋಲನುಭವಿಸಿ ಕಂಚಿನ ಪದಕ ವಂಚಿತವಾಗಿದ್ದ ಭಾರತ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು 3-2 ಅಂತರದಿಂದ ಗೆದ್ದುಕೊಂಡಿತ್ತು.
ಆರನೆ ನಿಮಿಷದಲ್ಲಿ ಗೋಲು ಬಾರಿಸಿದ ಆಕಾಶ್‌ದೀಪ್ ಸಿಂಗ್ ಭಾರತಕ್ಕೆ ಆರಂಭದಲ್ಲೇ 1-0 ಮುನ್ನಡೆ ಒದಗಿಸಿಕೊಟ್ಟರು. ಆದರೆ, 13ನೆ ನಿಮಿಷದಲ್ಲಿ ಗೋಲು ಬಾರಿಸಿದ ಟ್ರೆಂಟ್ ಮಿಟ್ಟನ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.
22ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ನಾಯಕ ವಿ.ಆರ್. ರಘುನಾಥ್ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ಆದರೆ, 23ನೆ ನಿಮಿಷದಲ್ಲಿ ಗೋಲು ಬಾರಿಸಿದ ಜಾಕ್ ವೆಟ್ಟಿ 2-2 ರಿಂದ ಸಮಬಲ ಸಾಧಿಸಿದರು.
25ನೆ ನಿಮಿಷದಲ್ಲಿ ರಘುನಾಥ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಬಾರಿಸಿದ ಗೋಲಿನ ಸಹಾಯದಿಂದ ಭಾರತ ಮತ್ತೊಮ್ಮೆ 3-2 ಮುನ್ನಡೆ ಪಡೆಯಿತು. 38ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದ ಹೇವಾರ್ಡ್ ಆಸ್ಟ್ರೇಲಿಯ 3-3 ರಿಂದ ಸಮಬಲಗೊಳಿಸಲು ನೆರವಾದರು.
51ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಹೆವಾರ್ಡ್ ಆಸ್ಟ್ರೇಲಿಯಕ್ಕೆ 4-3 ಅಂತರದ ರೋಚಕ ಗೆಲುವು ತಂದರು.







