ಕಾಲುವೆಗಳಿಗೆ ನೀರು ಹರಿಸಲು ಒತ್ತಾಯ 2ನೆ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
ಕುಶಾಲನಗರ, ನ.30: ಹಾರಂಗಿ ಜಲಾಶ ಯದಿಂದ ಕಾಲುವೆಗಳ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಹಾರ್ನಳ್ಳಿ ಹೋಬಳಿ ರೈತರು ಮಂಗಳವಾರ ಇಲ್ಲಿನ ಕಾವೇರಿ ನೀರಾವರಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಶ್ಯಾನಭೋಗನಹಳ್ಳಿ ರೈತ ಮುಖಂಡ ಎಲ್.ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಆಗಮಿಸಿದ ರೈತರು ನೀರಿಲ್ಲದೆ ಭತ್ತದ ಬೆಳೆಗಳು ಒಣಗುತ್ತಿದ್ದು, ಬೆಳೆಗಳ ರಕ್ಷಣೆಗೆ ಕೂಡಲೇ ನೀರು ಹರಿಸುವಂತೆ ಆಗ್ರಹಿಸಿದರು.
ರೈತರು ಕೈಗೊಂಡಿರುವ ಭತ್ತ ಕೃಷಿ ಗರ್ಭಕಟ್ಟುವ ಸಮಯ ಬಂದಿದ್ದು, ಈಗ ನೀರಿನ ಆವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ 10 ದಿನಗಳ ವರೆಗೆ ಮಾತ್ರ ಕಾಲುವೆಯಲ್ಲಿ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಅಧಿಕಾರಿಗಳನ್ನು ಒತ್ತಾಯಿಸಿದರು.
ಹಾರ್ನಳ್ಳಿ ಹೋಬಳಿಯ ಶ್ಯಾನಬೊಗನಹಳ್ಳಿ, ಚಾಮರಾಯನಕೋಟೆ, ದೊಡ್ಡಕಮರವಳ್ಳಿ, ದಿಂಡಿಗಾಡು, ಮತ್ತಿನಮುಳ್ಳುಸೋಗೆ, ಆವರ್ತಿ ಮತ್ತಿತರರ ಗ್ರಾಮಗಳಿಂದ ಪಾಲ್ಗೊಂಡಿದ್ದ ರೈತರು ಡಿಸೆಂಬರ್ ತನಕ ಕೃಷಿ ಚಟುವಟಿಕೆಗೆ ನೀರು ಕೊಡುವುದಾಗಿ ಭರವಸೆ ನೀಡಿದ್ದೀರಿ ಅದನ್ನು ಈಡೇರಿಸುವ ತನಕ ನಾವು ಜಾಗಖಾಲಿ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದಿರು.
ಇದೇ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆವರ್ತಿಯ ಎ.ಎಸ್ ಚಂದ್ರಶೇಖರ್, ನಾವು ನೀರು ಬಿಡಿ ಎಂದು ಕೇಳುತ್ತಿರುವುದು ಗಾಂಜಾ ಬೆಳೆಸುವುದಕ್ಕೆ ಅಲ್ಲ...! 2,000 ಹೆಕ್ಟೇರ್‌ನಲ್ಲಿ ನಾವು ಕಷ್ಟ ಪಟ್ಟು ಬೆಳೆದ ಬೆಳೆಯು ನಮ್ಮ ಕಣ್ಣೆದುರಿಗೆ ಒಣಗಿ ಹೋಗುತ್ತಿದೆ. ನಮಗೆ ಬೇಕಿರುವುದು 0.4 ಟಿ.ಎಂ.ಸಿ ನೀರು ಇದರಿಂದ ನಮಗೆ ಫಸಲು 10ದಿನಗಳಲ್ಲಿ ಕೈಸೇರುತ್ತದೆ. 40 ಸಾವಿರ ಕುಟುಂಬಗಳು ಬದುಕುತ್ತವೆಂದು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಅಧೀಕ್ಷಕ ಅಭಿಯಂತರ ಚಂದ್ರಕುಮಾರ್‌ರವರು, ಈಗ ಜಲಾಶಯದಲ್ಲಿ ಕೇವಲು 1.04 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ.
ಈ ಹಿನ್ನೆಲೆಯಲ್ಲಿ ರೈತರ ಕೃಷಿ ಚಟು ವಟಕೆಗೆ ನೀರು ಪೂರೈಸಲು ಸಾಧ್ಯವಿಲ್ಲ ಹಾಗೆ ಈಗ ಜಲಾಶಯದಲ್ಲಿಯೇ ನೀರಿಲ್ಲ ಮುಂದಿನ 7 ತಿಂಗಳು ಜನರಿಗೆ ಮೊದಲ ಅದ್ಯತೆಯಂತೆ ಕುಡಿಯಲು ನೀರಿನ ಸಮಸ್ಯೆ ಉಂಟಾಗದಂತೆ ಕುಡಿಯುವ ನೀರಿಗಾಗಿ ಜಲಾಶಯದಲ್ಲಿ ನೀರನ್ನು ಕಾಯ್ದಿರಿಸಬೇಕು ಎಂದು ಆದೇಶವಿರುವ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂದರು. ಇದರಿಂದ ಆಕ್ರೋಶಗೊಂಡ ರೈತರು ಹಾರಂಗಿ ಜಲಾಶಯದಿಂದ ಎಲ್ಲಿ-ಎಲ್ಲಿಗೆ ಕುಡಿಯುವ ನೀರು ಕೋಡುತ್ತಿದ್ದೀರ ಉತ್ತರಿಸಿ ಎಂದಾಗ, ಅಧೀಕ್ಷಕರು ಮೌನಕ್ಕೆ ಶರಣಾದರು. ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಕಚೆೇರಿಗೆ ಬೀಗ ಹಾಕಲು ರೈತರು ಮುಂದಾದ ಪ್ರಸಂಗ ನಡೆಯಿತು. ಕೂಡಲೇ ಎಚ್ಚೆತ್ತ ಪೊಲೀಸರು ರಕ್ಷಣೆಗೆ ಮುಂದಾದರು.
ಈ ಸಂದರ್ಭ ರೈತ ಮುಖಂಡರಾದ ಸುಂದರೇಶ್ ಗೌಡ, ದೇವೇಂದ್ರಪ್ಪ, ಯೋಗೇಶ್ ಗೌಡ, ಬಿ.ಎನ್.ಸೋಮಪ್ಪ, ಪರಮೇಶ್, ಬಿ.ಶಿವಣ್ಣ ಹಾಗೂ 100ಕ್ಕೂ ಅಧಿಕ ಮಂದಿ ರೈತರು ಉಪಸ್ಥಿತರಿದ್ದರು. ಸಿಐ ಕ್ಯಾತೇಗೌಡ ಮತ್ತು ಎಸೈ ಜಗದೀಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.







