ಇಂದು ನೂರುಲ್ ಮುಬೀನ್ ಈದ್ ಮಿಲಾದ್ ಕಾರ್ಯಕ್ರಮಕ್ಕೆ ಚಾಲನೆ
ಮಡಿಕೇರಿ, ನ.30: ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ ದಿನದ ಅಂಗವಾಗಿ ಮರ್ಕಝುಲ್ ಹಿದಾಯ ಶಿಕ್ಷಣ ಸಂಸ್ಥೆಯ ಅಲ್ ಇಕ್ವಾನುಲ್ ಹುದಾತ್ ವಿದ್ಯಾರ್ಥಿ ಸಂಘಟನೆಯಿಂದ ಡಿ.1ರಿಂದ ಒಂದು ತಿಂಗಳ ಕಾಲ ನೂರುಲ್ ಮುಬೀನ್ ಈದ್ ಮಿಲಾದ್ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸಂಚಾಲಕ ಉಮರುಲ್ ಫಾರೂಕ್ ಮಾತನಾಡಿ, ಡಿ.1ರಂದು ಕಾರ್ಯಕ್ರಮದ ಪ್ರಯುಕ್ತ ನಾಪೊಕ್ಲು ಪಟ್ಟಣದಲ್ಲಿ ಮಿಲಾದ್ ಸಂದೇಶ ರ್ಯಾಲಿ ನಡೆಯಲಿದೆ ಎಂದರು.
ಒಂದು ತಿಂಗಳ ಕಾಲ ಪ್ರತಿ ದಿನ ಬೆಳಗ್ಗೆ ‘ಮಾರ್ನಿಂಗ್ ನಶೀದ್’ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಸಂಜೆ ಟ್ವಿಲೈಟ್ ಟಾಕ್ ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ, ಆರೋಗ್ಯ, ಸಾಹಿತ್ಯ , ರಾಜಕೀಯ, ಇತಿಹಾಸ, ಭಾಷೆ, ಧಾರ್ಮಿಕ ಮತ್ತು ಲೌಕಿಕ ವಿಷಯಗಳ ಕುರಿತು ಚರ್ಚೆಗಳು ನಡೆಯಲಿದೆ ಎಂದರು.
ಪ್ರತಿದಿನ ಪ್ರವಾದಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಅಗತ್ಯವಿರುವ ಸುನ್ನತ್ ಪ್ರಾಕ್ಟಿಕಲ್ ಟ್ರೈನಿಂಗನ್ನು ಕೂಡ ಆಯೋಜಿಸಲಾಗಿದೆ ಎಂದು ಫಾರೂಕ್ ತಿಳಿಸಿದರು.
ಸ್ವಲಾತ್ ಕಾರ್ಯಕ್ರಮ, ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಹಾಗೂ ಹದೀಸ್ ಮುನಾಖಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ದೃಶ್ಯವಾಹಿನಿಗಳಲ್ಲಿ ಸೆಲಬ್ರೆಟ್ ಮರ್ಸಿ ಸ್ಪೀಚ್ ಬಿತ್ತರ ಮಾಡಲಾಗುತ್ತದೆ ಎಂದು ತಿಳಿಸಿದ ಅವರು, ಪ್ರವಾದಿ ಮುಹಮ್ಮದ್‌ರ ನೈಜ ಸಂದೇಶಗಳನ್ನು ಜನ ಸಾಮಾನ್ಯರಿಗೆ ತಲುಪಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಮತ್ತು ವಿದ್ಯಾರ್ಥಿ ಸಂಘಟನೆಯ ಗುರಿಯಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಅಬ್ದುಲ್ ನಾಸಿರ್ ಉಪಸ್ಥಿತರಿದ್ದರು.







