ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ: ಐವರು ಪೊಲೀಸ್ ವಶಕ್ಕೆ
ಭಟ್ಕಳ, ನ.30: ಪೂರ್ವಾನುಮತಿಯಿಲ್ಲದೆ ರಸ್ತೆ ದುರಸ್ತಿಗೆ ಆಗ್ರಹಿಸಿ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿ, ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಐದು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ವಿವರ: ತಾಲೂಕಿನ ಮುಂಡಳ್ಳಿ ಚರ್ಚ್‌ರೋಡ್ ರಸ್ತೆಯು ಹೊಂಡಮಯವಾಗಿದ್ದು, ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಈ ಭಾಗದ ನೂರಕ್ಕೂ ಹೆಚ್ಚು ಜನರು ಮಂಜುನಾಥ ಶನಿಯಾರ ನಾಯ್ಕ, ಮಹೇಂದ್ರ ಶನಿಯಾರ ನಾಯ್ಕ, ಕುಮಾರ ನಾಯ್ಕ, ತಿಮ್ಮಪ್ಪನಾಯ್ಕ, ವಾಸು ಈರಪ್ಪನಾಯ್ಕರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಪ್ರತಿಭಟನಾಕಾರರು ಭಟ್ಕಳ ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರಲ್ಲದೆ, ಘೋಷಣೆ ಕೂಗಿದ್ದರು. ಆದರೆ, ಪ್ರತಿಭಟನೆ ಕುರಿತಂತೆ ಯಾವುದೇ ಪೂರ್ವಾನುಮತಿ ಪಡೆಯದೆ ನೂರಾರು ಜನರನ್ನು ಸೇರಿಸಿ ಶಾಂತಿಗೆ ಭಂಗವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಐದು ಮಂದಿಯ ವಿರುದ್ಧ ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದಾರೆ.





