‘ಸ್ಮಾರ್ಟ್ ಸಿಟಿಯೋ... ಗುಂಡಿ-ಗಟಾರಗಳ ಸಿಟಿಯೋ...?’
ಶಿವಮೊಗ್ಗ ನಗರದ ರಸ್ತೆಗಳ ಅವ್ಯವಸ್ಥೆ ಗಮನ ಹರಿಸದ ಮಹಾನಗರ ಪಾಲಿಕೆ ಆಡಳಿತ
_0.jpg)
ಪಿಡಬ್ಲ್ಯೂಡಿ ಇಲಾಖೆಯಿಂದಲೂ ನಿರ್ಲಕ್ಷ...!
ಶಿವಮೊಗ್ಗ, ನ. 30: ಕೇಂದ್ರ ಸರಕಾದ ಪ್ರತಿಷ್ಠಿತ ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಶಿವಮೊಗ್ಗ ನಗರ ಆಯ್ಕೆಯಾಗುವ ಮೂಲಕ, ಇಡೀ ದೇಶದ ಗಮನ ಸೆಳೆದಿದೆ. ಆದರೆ ಕಳೆದ ಹಲವು ತಿಂಗಳುಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗಟಾರಗಳನ್ನು ಗಮನಿಸಿದರೆ ‘ಸ್ಮಾರ್ಟ್ ಸಿಟಿಯೋ..?’ ‘ಗುಂಡಿ-ಗಟಾರಗಳ ಸಿಟಿಯೋ?’ ಎಂಬ ಅನುಮಾನ ವ್ಯಕ್ತವಾಗುವಂತಾಗಿದೆ!
ನಗರ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿರುವ ಮುಖ್ಯ ರಸ್ತೆಗಳು ಸೇರಿದಂತೆ ಒಳ ರಸ್ತೆಗಳಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಗುಂಡಿ - ಗಟಾರಗಳು ಬಿದ್ದು, ಜನ - ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ರಸ್ತೆಯ ಅವ್ಯವಸ್ಥೆಯಿಂದ ಸಣ್ಣಪುಟ್ಟ ಅಪಘಾತಗಳು ಸರ್ವೇಸಾಮಾನ್ಯ ಎಂಬಂತಾಗಿದೆ. ಮತ್ತೊಂದೆಡೆ ಧೂಳಿನ ಪ್ರಮಾಣ ಕೂಡ ಹೆಚ್ಚಳವಾಗಿದ್ದು, ನಾಗರಿಕರು ನಾನಾ ರೀತಿಯ ಅನಾರೋಗ್ಯ ಸಮಸ್ಯೆಗೂ ಸಿಲುಕುವಂತಾಗಿದೆ. ‘ಇಷ್ಟೆಲ್ಲ ಅವ್ಯವಸ್ಥೆ ಮನೆಮಾಡಿದ್ದರೂ ಇಲ್ಲಿಯವರೆಗೂ ಮಹಾನಗರ ಪಾಲಿಕೆ ಆಡಳಿತ ರಸ್ತೆಗಳ ಗುಂಡಿ - ಗಟಾರ ಮುಚ್ಚಲು ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ.
ಇದರಿಂದ ನಮ್ಮ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ. ಇದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಧೂಳುಮಯ: ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗಟಾರಗಳಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ಧೂಳಿನ ಪ್ರಮಾಣ ಹೆಚ್ಚಾಗಿದೆ. ಧೂಳಿನಿಂದ ನಾಗರಿಕರು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದ್ದು, ನಾನಾ ರೀತಿಯ ಅನಾರೋಗ್ಯಕ್ಕೂ ತುತ್ತಾಗುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ. ಹೊಂಡ ಮುಚ್ಚಿಲ್ಲ: ಸರ್ವೇಸಾಮಾನ್ಯವಾಗಿ ಮಳೆಗಾಲದ ವೇಳೆ ರಸ್ತೆಗಳಲ್ಲಿ ಗುಂಡಿ - ಗಟಾರ ಬೀಳುತ್ತವೆ. ಮಳೆಯ ಕಾರಣದಿಂದ ಈ ಸಮಯದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವುದಿಲ್ಲ. ಮಳೆಗಾಲ ಪೂರ್ಣಗೊಂಡ ನಂತರ ರಸ್ತೆಗಳ ಅವ್ಯವಸ್ಥೆ ಸರಿಪಡಿಸಲು ಸ್ಥಳೀಯಾಡಳಿತ ಕ್ರಮಕೈಗೊಳ್ಳುತ್ತದೆ. ಇದು ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪ್ರಕ್ರಿಯೆಯಾಗಿದೆ. ಆದರೆ ಪ್ರಸ್ತುತ ಮಳೆಗಾಲದ ಅವಧಿ ಪೂರ್ಣಗೊಂಡರೂ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗಟಾರ ಮುಚ್ಚುವುದಕ್ಕೆ ಹಾಗೂ ರಸ್ತೆಗಳಲ್ಲಿ ಆವರಿಸಿರುವ ಧೂಳು ತೆರವಿಗೆ ಮಹಾನಗರ ಪಾಲಿಕೆ ಆಡಳಿತ ಗಮನಹರಿಸಿಲ್ಲ. ಇದಕ್ಕೆ ಕಾರಣವೆನೆಂಬುದು ತಿಳಿಯದಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಮಹಾನಗರ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸುವುದಕ್ಕೂ ಮುನ್ನವೇ ನಗರವ್ಯಾಪ್ತಿಯ ವಿವಿಧ ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗಟಾರ ಮುಚ್ಚಲು ಕ್ರಮಕೈಗೊಳ್ಳಲಿದೆಯೇ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ. ಪಿಡಬ್ಲ್ಯೂಡಿ ಇಲಾಖೆಯ ಶಿವಮೊಗ್ಗ ವ್ಯಾಪ್ತಿಯ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಬಾಲಕೃಷ್ಣ ಅವರು ಕಾಲಮಿತಿಯೊಳಗೆ ಇಲಾಖೆ ವ್ಯಾಪ್ತಿಯ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ ಬಿದ್ದಿರುವ ಗುಂಡಿ-ಗಟಾರ ಮುಚ್ಚಲು ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಅವರ ಸ್ಪೀಡ್‌ಗೆ ಅನುಗುಣವಾಗಿ ಅವರ ಕೆಳಹಂತದ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡದ ಕಾರಣದಿಂದ ಇಂದಿಗೂ ಪಿಡಬ್ಲ್ಯೂಡಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗಟಾರಗಳಿಗೆ ಮೋಕ್ಷ ಸಿಕ್ಕಿಲ್ಲವಾಗಿದೆ. ಶಿವಮೊಗ್ಗ - ರಾಮನಗರ ಜಿಲ್ಲಾ ಹೆದ್ದಾರಿಯ ನಗರ ವ್ಯಾಪ್ತಿಯ ಹಲವೆಡೆ ರಸ್ತೆಯು ಹಾಳಾಗಿದೆ. ಭಾರೀ ದೊಡ್ಡ ಗುಂಡಿಗಳು ಬಿದ್ದಿವೆ. ಆದರೆ ಇಲ್ಲಿಯವರೆಗೂ ಪಿಡಬ್ಲ್ಯೂಡಿ ವಿಶೇಷ ವಿಭಾಗದ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ವಾಹನ ಸವಾರರು ತೀವ್ರ ತೊಂದರೆಗೊಳಗಾಗುವಂತಾಗಿದೆ. ಈ ಹಿನ್ನೆಲೆಯಲ್ಲಿ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಬಾಲಕೃಷ್ಣ ತಮ್ಮ ಕೆಳಹಂತದ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕಾಗಿದೆ ಎಂದು ನಾಗರಿಕರು ಹೇಳುತ್ತಾರೆ.
ನಗರದ ಹೃದಯ ಭಾಗದಲ್ಲಿರುವ ಪಾರ್ಕ್ ಬಡಾವಣೆ ಹಾಗೂ ತಿಲಕ್‌ನಗರದ ಮುಖ್ಯ ರಸ್ತೆಗಳಲ್ಲಿಯೇ ಭಾರೀ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ. ಈ ರಸ್ತೆಯಲ್ಲಿಯೇ ದಿನನಿತ್ಯ ಹಲವು ಪಾಲಿಕೆ ಅಧಿಕಾರಿಗಳು ಸಂಚರಿಸುತ್ತಾರೆ. ಆದಾಗ್ಯೂ ರಸ್ತೆಗಳ ಅವ್ಯವಸ್ಥೆ ಸರಿಪಡಿಸಲು ಮುಂದಾಗಿಲ್ಲ. ಇನ್ನೂ ನಗರದ ಇತರ ಬಡಾವಣೆಗಳಲ್ಲಿ ರಸ್ತೆಗಳ ದುಃಸ್ಥಿತಿ ಗಮನಿಸಿದರೆ ಇದೇನಾ ಸ್ಮಾರ್ಟ್ ಸಿಟಿ? ರಸ್ತೆಗಳು ಹೀಗೂ ಇರುತ್ತವೆಯೇ ಎಂಬ ಅನುಮಾನ ವ್ಯಕ್ತವಾಗುತ್ತದೆ.
- ವಿನೋದ್‌ಕುಮಾರ್, ನಿವಾಸಿ
ರಸ್ತೆಗಳಲ್ಲಿ ದ್ವಿ ಚಕ್ರ ವಾಹನ ಚಾಲನೆ ಮಾಡುವುದೇ ದುಸ್ತರವಾಗಿದೆ. ರಾತ್ರಿ ಸಮಯದಲ್ಲಂತೂ ಜೀವ ಕೈಯಲ್ಲಿಡಿದು ದ್ವಿ ಚಕ್ರ ವಾಹನ ಸವಾರರು ವಾಹನ ಚಲಾಯಿಸುವಂತಾಗಿದೆ. ಕೊಂಚ ಹೆಚ್ಚುಕಮ್ಮಿಯಾದರೂ ಅಪಘಾತ ನಿಶ್ಚಿತ ಎಂಬಂತಾಗಿದೆ. ಈಗಾಗಲೇ ಹಲವು ದ್ವಿ ಚಕ್ರ ವಾಹನ ಸವಾರರು, ರಾತ್ರಿಯ ವೇಳೆಯಿರಲಿ, ಹಗಲು ಹೊತ್ತಿನಲ್ಲಿಯೇ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗಟಾರಿನ ಕಾರಣದಿಂದಲೇ ಅಪಘಾತಕ್ಕೀಡಾಗಿದ್ದಾರೆ.
- ಗಿರೀಶ್, ಬೈಕ್ ಸವಾರ







