ರಣಜಿ: ಮಹಾರಾಷ್ಟ್ರಕ್ಕೆ ಒಡಿಶಾ ಶಾಕ್
ಎರಡೇ ದಿನಕ್ಕೆ ಪಂದ್ಯ ಮುಕ್ತಾಯ
ವಯನಾಡು(ಕೇರಳ), ನ.30: ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಇನಿಂಗ್ಸ್ ಹಾಗೂ 118 ರನ್‌ಗಳ ಅಂತರದಿಂದ ಮಣಿಸಿದ ಒಡಿಶಾ ತಂಡ ಬೋನಸ್ ಅಂಕ ಪಡೆದಿದೆ.
ಇನ್ನು ಎರಡು ದಿನಗಳ ಆಟ ಬಾಕಿ ಇರುವಂತೆಯೇ ಜಯಭೇರಿ ಬಾರಿಸಿರುವ ಒಡಿಶಾ ಒಂದೇ ದಿನ ಮಹಾರಾಷ್ಟ್ರವನ್ನು ಎರಡೂ ಇನಿಂಗ್ಸ್‌ಗಳಲ್ಲಿ ಆಲೌಟ್ ಮಾಡಿ ಗಮನ ಸೆಳೆಯಿತು.
ಬುಧವಾರ 9 ವಿಕೆಟ್‌ಗಳ ನಷ್ಟಕ್ಕೆ 311 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಒಡಿಶಾ 2.4 ಓವರ್‌ಗಳ ಬ್ಯಾಟಿಂಗ್ ಮಾಡಿ 319 ರನ್‌ಗೆ ಆಲೌಟಾಯಿತು. ಮಹಾರಾಷ್ಟ್ರದ ಅನುಪಮ್ ಸಕ್ಲೇಚಾ(5-75) ಮತ್ತೊಮ್ಮೆ ಐದು ವಿಕೆಟ್ ಗೊಂಚಲು ಪಡೆದರು.
ಮೊದಲ ಇನಿಂಗ್ಸ್ ಆರಂಭಿಸಿದ ಮಹಾರಾಷ್ಟ್ರ ತಂಡ ಒಡಿಶಾದ ಮಧ್ಯಮ ವೇಗಿಗಳಾದ ಸೂರ್ಯಕಾಂತ್ ಪ್ರಧಾನ್(4-34), ಬಸಂತ್ ಮೊಹಾಂತಿ(3-20) ಹಾಗೂ ದೀಪಕ್ ಬೆಹ್ರಾ(3-16) ದಾಳಿಗೆ ಸಿಲುಕಿ 26 ಓವರ್‌ಗಳಲ್ಲಿ ಕೇವಲ 94 ರನ್‌ಗೆ ಆಲೌಟಾಯಿತು.
ಫಾಲೋ-ಆನ್‌ಗೆ ಸಿಲುಕಿದ ಮಹಾರಾಷ್ಟ್ರ ಎರಡನೆ ಇನಿಂಗ್ಸ್‌ನಲ್ಲಿ 107 ರನ್‌ಗೆ ಆಲೌಟ್ ಆಗಿ ಕಳಪೆ ಪ್ರದರ್ಶನ ಪುನರಾವರ್ತಿಸಿತು. ಮಹಾರಾಷ್ಟ್ರ ಒಂದು ಹಂತದಲ್ಲಿ 45 ರನ್‌ಗೆ 7 ವಿಕೆಟ್ ಕಳೆದುಕೊಂಡಿತ್ತು. ಆಗ 8ನೆ ವಿಕೆಟ್‌ಗೆ 55 ರನ್ ಸೇರಿಸಿದ ವಿಶಾಂತ್ ಮೋರೆ ಹಾಗೂ ಸಕ್ಲೇಚಾ ತಂಡವನ್ನು ಮುಜುಗರದಿಂದ ಪಾರು ಮಾಡಿದರು.
ಎರಡನೆ ಇನಿಂಗ್ಸ್‌ನಲ್ಲಿ ಬಿಪ್ಲಬ್ ಸಮಂಟ್ರೆ ಜೀವನಶ್ರೇಷ್ಠ(4-34) ಬೌಲಿಂಗ್ ಮಾಡಿದರು. ಪ್ರಧಾನ್ ಮತ್ತೊಮ್ಮೆ 36 ರನ್‌ಗೆ 3 ವಿಕೆಟ್ ಕಬಳಿಸಿದರು.
ಆಲ್‌ರೌಂಡ್ ಪ್ರದರ್ಶನ ನೀಡಿದ ಬಿಪ್ಲಬ್ ಸಮಂಟ್ರೆ(89 ರನ್, 4-34) ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು.
ಸಂಕ್ಷಿಪ್ತ ಸ್ಕೋರ್
ಒಡಿಶಾ ಪ್ರಥಮ ಇನಿಂಗ್ಸ್: 319
(ಸಮಂಟ್ರೆ 89, ಬೆಹ್ರಾ 58, ಸಕ್ಲೇಚ 5-75, ಸೈಯದ್ 3-65)
ಮಹಾರಾಷ್ಟ್ರ ಮೊದಲ ಇನಿಂಗ್ಸ್: 94
(ಸಕ್ಲೇಚ 18, ಪ್ರಧಾನ್ 4-34, ಮೊಹಾಂತಿ 3-20, ಬೆಹ್ರಾ 3-16)
ಮಹಾರಾಷ್ಟ್ರ ಎರಡನೆ ಇನಿಂಗ್ಸ್: 107
(ಮೋರೆ 29, ಸಕ್ಲೇಚಾ 22, ಸಮಂಟ್ರೆ 4-34, ಪ್ರಧಾನ್ 3-36)







