ಅಲ್ಪಸಂಖ್ಯಾತ ಮೀನುಗಾರರ ಸಂಘಕ್ಕೆ ಪ್ರಶಸ್ತಿ
ಮಂಗಳೂರು, ನ.30: ಕರಾವಳಿ ಅಲ್ಪಸಂಖ್ಯಾತರ ಮೀನುಗಾರಿಕಾ ಪ್ರಾಥಮಿಕ ಸಹಕಾರಿ ಸಂಘಕ್ಕೆ ಸೇವಾ ಕ್ಷೇತ್ರದಲ್ಲಿ 2ನೇ ಬಾರಿಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದೆ.
ಮಂಗಳೂರಿನಲ್ಲಿ ನಡೆದ 63ನೆ ಅಖಿಲ ಭಾರತ ಸಹಕಾರ ಸಪ್ತಾಹ-2016ರಲ್ಲಿ ರಾಜ್ಯ ಸಹಕಾರ ಸಚಿವ ಎಚ್.ಎಂ.ಮಹದೇವ ಪ್ರಸಾದ್ ಅವರು ಅಧ್ಯಕ್ಷ ಜೆ.ಮುಹಮ್ಮದ್ ಇಸಾಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಅಬ್ದುಲ್ಲತೀಫ್ ಅವರಿಗೆ ಹಸ್ತಾಂತರಿಸಿದರು.
2002ರಲ್ಲಿ ಮಂಗಳೂರು ಉತ್ತರ ದಕ್ಕೆಯಲ್ಲಿ ಆರಂಭಗೊಂಡ ಈ ಸಹಕಾರ ಸಂಘದಿಂದ ಮೂತ್ರಪಿಂಡ ವೈಫಲ್ಯಕ್ಕೊಳಗಾದವರು, ಕ್ಯಾನ್ಸರ್ ಹಾಗೂ ಹೃದಯ ಕಾಯಿಲೆಗೊಳಗಾದವರ ಚಿಕಿತ್ಸೆಗೆ ಧನ ಸಹಾಯ, ಬಡ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕ, ಸ್ಕಾಲರ್‌ಶಿಪ್, ಗುರುತು ಚೀಟಿ ಹಾಗೂ ಶಿಕ್ಷಣಕ್ಕೆ ಸಂಬಂಧಪಟ್ಟ ಪರಿಕರಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಮೀನುಗಾರಿಕಾ ಬೋಟುಗಳಿಗೆ ಸಂಬಂಧಪಟ್ಟಂತೆ ಡಿಸೇಲ್, ಸೀಮೆಎಣ್ಣೆ, ಆಯಿಲ್ ವ್ಯಾಪಾರದಲ್ಲಿ ಬಂದ ವಾರ್ಷಿಕ ಲಾಭದಲ್ಲಿ ಶೇ.10 ಸಾಮಾಜಿಕ ಚಟುವಟಿಕೆಗೆ ಬಳಸಲಾಗುತ್ತಿದೆ. ಮೀನುಗಾರರ ಸಮಸ್ಯೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕರಾದ ಮೊಯ್ದಿನ್ ಬಾವ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತುಗೋಡು, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಹಾಲಪ್ಪಬಸಪ್ಪಆಚಾರ, ಸಹಕಾರ ಇಲಾಖೆ ವ್ಯವಸ್ಥಾಪಕ ನಿರ್ದೇಶಕಿ ಅಜಿ ಫಿಲಿಪ್ಸ್ ಉಪಸ್ಥಿತರಿದ್ದರು.





