ಇಂದು ತಿಂಗಳ ವೇತನ ದಿನ: ಬ್ಯಾಂಕ್ ಗಳಿಗೆ ಅಗ್ನಿಪರೀಕ್ಷೆ

ಬೆಂಗಳೂರು, ನ.30: ಈ ಮೊದಲು ಒಂದನೆ ತಾರೀಖು ಬಂದರೆ ನೌಕರನ ಮೊಗದಲ್ಲಿ ಸಂತಸವಿತ್ತು. ಮನೆಯಲ್ಲಿ ಹಬ್ಬದ ಸಂಭ್ರಮದ ವಾತಾವರಣವಿತ್ತು. ಆದರೆ ಡಿಸೆಂಬರ್ ತಿಂಗಳ ಒಂದನೆ ತಾರೀಕಿನಂದು ಭಾಗಶಃ ಈ ಚಿತ್ರಣವನ್ನು ದುಡಿಯುವ ವರ್ಗದ ಕುಟುಂಬದಲ್ಲಿ ಕಾಣುವುದು ದುಸ್ತರವಾಗಿದೆ.
ಯಾವುದೇ ಮುಂಜಾಗ್ರತೆ ಇಲ್ಲದೆ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ 22 ದಿನ ಕಳೆದರೂ ನಗದು ಕೊರತೆ ಇನ್ನೂ ತಗ್ಗಿಲ್ಲ. ನವೆಂಬರ್ ತಿಂಗಳ ವೇತನವನ್ನು ಡಿಸೆಂಬರ್ ಮೊದಲ ವಾರದಲ್ಲೇ ಪಡೆಯುವ ನಿರೀಕ್ಷೆಯಲ್ಲಿರುವ ನೌಕರರಿಗೆ ಸಂಬಳ ಸಿಗುವುದೇ ಅನುಮಾನವಾಗಿದೆ. ಗ್ರಾಹಕರಿಗೆ ಅಗತ್ಯವಿರುವ ನಗದು ಪೂರೈಸಲು ವಿವಿಧ ಮುಖಬೆಲೆಯ ನೋಟುಗಳನ್ನು ಹೊಂದಿಸಲು ಬ್ಯಾಂಕ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಡಿಸೆಂಬರ್ ಆರಂಭದಲ್ಲಿ ನೌಕರ ವರ್ಗದ ಅಗತ್ಯ ನಗದು ಪೂರೈಸುವುದು ಹೇಗೆಂಬ ಆತಂಕ ಬ್ಯಾಂಕ್‌ಗಳಿಗೂ ಕಾಡಿದೆ. ಲಭ್ಯವಿರುವ ನಗದಿನಲ್ಲೇ ನೌಕರರಿಗೆ ಸರಿದೂಗಿಸುವ ಲೆಕ್ಕಾಚಾರದಲ್ಲಿ ಬ್ಯಾಂಕ್ ಸಿಬ್ಬಂದಿ ತೊಡಗಿದ್ದಾರೆ.
ನೋಟು ರದ್ದುಗೊಂಡು ನಗರದಲ್ಲಿನ ಬಹುತೇಕ ಎಟಿಎಂಗಳ ಮುಂಭಾಗ ನೋ ಕ್ಯಾಷ್, ಔಟ್ ಆಫ್ ಸರ್ವಿಸ್ ಬೋರ್ಡ್‌ಗಳು ಇನ್ನೂ ನೇತಾಡುತ್ತಿವೆ. ಚಾಲ್ತಿಯಲ್ಲಿರುವ ಎಟಿಎಂಗಳ ಮುಂದೆ ಇರುವ ಸಾಲು ತಡರಾತ್ರಿಯವರೆಗೂ ಕರಗದ ಸ್ಥಿತಿ ಇನ್ನೂ ಮುಂದುವರಿದಿದೆ.
ಇ-ಬ್ಯಾಂಕಿಂಗ್, ಮೊಬೈಲ್ ವಾಲೆಟ್‌ಗಳ ಮೂಲಕ ವೇತನ ಪಡೆಯುವ ನೌಕರರ ವರ್ಗ ಬ್ಯಾಂಕು ಎಟಿಎಂಗಳಿಗೆ ಮುಗಿಬೀಳುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಡಿಸೆಂಬರ್ ಮೊದಲ ಆರಂಭದಲ್ಲಿ ನಗದು ಪೂರೈಕೆ ಸಮಸ್ಯೆ ಅಷ್ಟೇನೂ ಕಾಡುವುದಿಲ್ಲ ಎನ್ನುವುದು ಕೆಲ ಬ್ಯಾಂಕ್ ಸಿಬ್ಬಂದಿಯ ಅಭಿಪ್ರಾಯ.
ತಿಂಗಳ ಮೊದಲನೆ ವಾರದಲ್ಲಿ ನಗರದ ನೌಕರರು ನಗದು ಸಂಬಳ ಪಡೆಯುವ ಪ್ರಮಾಣ ಶೇ.80ರಷ್ಟಿದೆ. ಕಟ್ಟಡ ಕಾರ್ಮಿಕರು, ಮನೆಗೆಲಸದವರು, ಅಸಂಘಟಿತ ಕಾರ್ಮಿಕರು, ಎಂಎನ್‌ಸಿ ಕಂಪನಿ ನೌಕರರು, ಅರೆಗುತ್ತಿಗೆ ನೌಕರರು, ದಿನಗೂಲಿ ಕಾರ್ಮಿಕರು, ಪೌರ ಕಾರ್ಮಿಕರು ಸೇರಿದಂತೆ ಕೆಲ ಖಾಸಗಿ ಸಂಸ್ಥೆಗಳು ತಿಂಗಳ ಆರಂಭದಲ್ಲೇ ವೇತನವನ್ನು ವಿತರಿಸಲಿವೆ. ಇವರ ವೇತನ ಪ್ರಕ್ರಿಯೆ ಎಲ್ಲ ಬ್ಯಾಂಕ್ ಮೂಲಕವೇ ನಡೆಯಲಿದೆ.
ಇದರಿಂದ ವೇತನಕ್ಕಾಗಿ ಬ್ಯಾಂಕುಗಳ ಮುಂದೆ ಜನರು ಸಾಲಾಗಿ ನಿಲ್ಲುವ ಸ್ಥಿತಿ ಮತ್ತಷ್ಟು ಹೆಚ್ಚಾಗಲಿದೆ, ಜನರ ಕೈಗೆ ಹಣ ಸಿಗದೇ ಇದ್ದಾಗ ಅದು ಪಡೆಯುವ ತಿರುವು ಊಹೆಗೂ ನಿಲುಕದಾಗಿದೆ. ನೌಕರರಿಗೆ ಅಗ್ನಿ ಪರೀಕ್ಷೆ: ನೋಟುಗಳ ನಿಷೇಧದಿಂದ ನೌಕರವರ್ಗಕ್ಕೆ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳುವುದು ಕಷ್ಟವಾಗಿದೆ. ಸಿಗುವ ವೇತನದಲ್ಲಿ ಕುಟುಂಬದ ತಿಂಗಳ ಬಜೆಟ್‌ಗೆ ಸರಿದೂಗಿಸುವ ನೌಕರರು ಈ ತಿಂಗಳಲ್ಲಿ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಾದ ಸನ್ನಿವೇಶ ನಿರ್ಮಾಣವಾಗಲಿದೆ. ತಿಂಗಳ ಆರಂಭದಲ್ಲಿ ಬಾಡಿಗೆ, ಹಾಲಿನ ಬಿಲ್, ವಾಟರ್ ಬಿಲ್, ಪೇಪರ್ ಬಿಲ್, ವಿದ್ಯುತ್ ಬಿಲ್, ಕೇಬಲ್ ಬಿಲ್ ಪಾವತಿಸದ ಸ್ಥಿತಿ ಗ್ರಾಹಕರದ್ದು. ಮಕ್ಕಳ ಶಾಲಾ ಶುಲ್ಕ, ಟ್ಯೂಷನ್ ಶುಲ್ಕಗಳು ಬಾರವಾಗಿವೆ. ಇನ್ನೂ ತಿಂಗಳಿಗೆ ಆಗುವ ಆಹಾರ ದಾನ್ಯ ಖರೀದಿಸುವುದೇ ದುಸ್ತರವಾಗಲಿದೆ.
500, 1000 ನೋಟುಗಳು ರದ್ದಾಗುವುದಕ್ಕೂ ಮೊದಲು ನಗರದ ಬ್ಯಾಂಕ್ ಶಾಖೆಯೊಂದಕ್ಕೆ ಸುಮಾರು ಒಂದು ಕೋಟಿ ನಗದು ಪೂರೈಕೆ ಆಗುತ್ತಿತ್ತು. ಆದರೆ ನೋಟು ರದ್ದುಗೊಂಡ ಬಳಿಕ ಇದರ ಪ್ರಮಾಣ ಕೇವಲ 8ರಿಂದ 10 ಲಕ್ಷ ಮಾತ್ರ ಆರ್‌ಬಿಐ ಪೂರೈಕೆ ಮಾಡುತ್ತಿದೆ. ಈ ಪರಿಣಾಮ ಜನರ ಕೈಗೆ ಹಣ ಸಿಗುವುದು ಕಷ್ಟವಾಗಿದೆ. ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ.
ಕೈಕೊಟ್ಟ ಎಟಿಎಂಗಳು: ಆದ್ಯತೆ ಇರುವ ಸ್ಥಳಗಳಲ್ಲಿ ಎಟಿಎಂಗಳಿಗೆ ಹಣ ಖಾಲಿ ಆಗುತ್ತಿದ್ದಂತೆ ನಗದನ್ನು ತುಂಬಲಾಗುತ್ತಿದೆ. ಇದರಿಂದ ಬಿಡುವಿಲ್ಲದೆ ಹಣವನ್ನು ವಿತ್‌ಡ್ರಾ ಮಾಡುತ್ತಿರುವದರಿಂದ ಎಟಿಎಂ ಯಂತ್ರಗಳು ಬ್ಲಾಕ್ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದ ಪುರಭವನದ ಎದುರುಗಡೆ ಇರುವ ಕೆನರಾ ಬ್ಯಾಂಕ್‌ನ ಕೇಂದ್ರ ಕಚೇರಿ ಆವರಣದಲ್ಲಿನ ಎಟಿಎಂ ಇದೇ ಕಾರಣದಿಂದ ಪದೇ ಪದೇ ಕೈಕೊಟ್ಟಿರುವುದರಿಂದ ಜನರು ರಕ್ಷಣಾ ಸಿಬ್ಬಂದಿ ವಿರುದ್ಧ ಸಿಟ್ಟಿಗೆದ್ದ ಪ್ರಸಂಗ ಬುಧವಾರ ನಡೆಯಿತು.
ಸುಮಾರು ಒಂದು ಗಂಟೆಯಿಂದ ಸಾಲಿನಲ್ಲಿ ಕಾದು ಹಣ ಪಡೆಯಲು ಕಾರ್ಡ್‌ನ್ನು ಸ್ವೈಪ್ ಮಾಡಿದರೆ ಟೆಂಪರರ್ಲಿ ಔಟ್ ಆಫ್ ಸರ್ವಿಸ್ ಎಂಬುವುದಾಗಿ ತೋರಿಸುತ್ತಿದೆ. ಇಲ್ಲಿ ಬಿಟ್ಟರೆ ಬೇರೆ ಯಾವ ಎಟಿಎಂಗಳಲ್ಲಿಯೂ ಹಣವಿಲ್ಲ. ಇನ್ನು ಬ್ಯಾಂಕಿನಲ್ಲಿ ಮಧ್ಯಾಹ್ನದ ವೇಳೆಗೆ ಹಣ ಖಾಲಿ ಆಗಿದೆ. ನಾಳೆವರೆಗೂ ಹಣಕ್ಕಾಗಿ ಕಾಯಬೇಕು ಎಂದು ನಗರ್ತಪೇಟೆಯ ಗಣಪತಿ ಆಳಲು ತೋಡಿಕೊಂಡರು.
ನಗದು ಕೊರತೆ ಕಾಡಲಿದೆ ಎಂಬ ಮುನ್ನೆಚ್ಚರಿಕೆಯಿಂದ ಕೆಲ ನೌಕರರು ಕಳೆದ ಒಂದು ವಾರದಿಂದ ಸಾಧ್ಯವಾದಷ್ಟು ಹಣವನ್ನು ಎಟಿಎಂಗಳಲ್ಲಿ ಪಡೆದುಕೊಂಡಿದ್ದಾರೆ. ಕೆಳ ಹಾಗೂ ಮಾಧ್ಯಮ ವರ್ಗದ ಜನರು ತಿಂಗಳಿಗೆ ಅಗತ್ಯವಿರುವಷ್ಟು ಹಣವನ್ನು ಶೇಖರಿಸಿರುವುದರಿಂದ ಬ್ಯಾಂಕುಗಳಲ್ಲಿ ಹಣದ ಕೊರತೆ ಇದೆ ಎಂದು ಇಂಡಿಯನ್ ಬ್ಯಾಂಕ್‌ನ ಸಿಬ್ಬಂದಿಯೊಬ್ಬರು ಅಭಿಪ್ರಾಯಿಸಿದರು.
ಇನ್ನೂ ಸಡಿಲಗೊಂಡಿಲ್ಲ ವಿತ್‌ಡ್ರಾ ಮಿತಿ:
ಬ್ಯಾಂಕುಗಳಲ್ಲಿ ಗ್ರಾಹಕರುವಿತ್‌ಡ್ರಾ ಮಾಡಲು ನಗದು ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಆರ್‌ಬಿಐ ಆದೇಶ ಹೊರಡಿಸಿತು. ಆದರೆ ಯಾವುದೇ ಬ್ಯಾಂಕುಗಳು ಆರ್‌ಬಿಐನ ಆದೇಶವನ್ನು ಪಾಲಿಸುತ್ತಿಲ್ಲ. ಈ ಕುರಿತು ಪ್ರಶ್ನಿಸುವ ಸಾರ್ವಜನಿಕರಿಗೆ ಬ್ಯಾಂಕ್ ಅಧಿಕಾರಿಗಳಿಂದ ಸೂಕ್ತ ಉತ್ತರವೂ ಸಿಗುತ್ತಿಲ್ಲ. ಚೋದ್ಯವೆಂದರ ಬ್ಯಾಂಕುಗಳ ಬಳಿ ಪ್ರತಿ ತಿಂಗಳ ಆರಂಭದಲ್ಲಿ ಜನರು ಎಷ್ಟು ಹಣವನ್ನು ತಮ್ಮ ಖಾತೆಗಳಿಂದ ವಾಪಸ್ ಪಡೆಯುತ್ತಾರೆ ಎಂಬ ದತ್ತಾಂಶಗಳೂ ಲಭ್ಯವಿಲ್ಲ. ಸರಕಾರದ ಮಾಸಿಕ ವೇತನದ ಬಿಲ್ ನೋಡಿ ಅದರಿಂದ ತಿಂಗಳ ಅಂಕಿಅಂಶಗಳನ್ನು ಅಂದಾಜಿಸುವುದು ಇದಕ್ಕಿರುವ ಏಕೈಕ ಮಾರ್ಗವಾಗಿದೆ. ಇದರಲ್ಲಿ ಶೇ.70ರಷ್ಟನ್ನು ಸಾಮಾನ್ಯವಾಗಿ ಹಿಂಪಡೆಯಲಾಗುತ್ತದೆ ಮತ್ತು ಶೇ.30ರಷ್ಟು ಉಳಿತಾಯಕ್ಕೆ ಸೇರುತ್ತದೆ. ಆದರೆ ಇದು ಕೂಡ ಸರಕಾರಿ ನೌಕರರ ವೇತನ ಹಿಂಪಡೆಯುವಿಕೆಯ ಮೊತ್ತದ ಬಗ್ಗೆ ಮಾತ್ರ ಮಾಹಿತಿಯನ್ನು ನೀಡುತ್ತದೆಯೇ ಹೊರತು ಖಾಸಗಿ ಕ್ಷೇತ್ರಗಳ ನೌಕರರದ್ದಲ್ಲ ಎಂದು ಕೇರ್ ರೇಟಿಂಗ್‌ನ ಮದನ್ ಸಬ್ನವೀಸ್ ಅಭಿಪ್ರಾಯಿಸಿದ್ದಾರೆ. ನೋಟು ನಿಷೇಧದ ಬಳಿಕ ಆಗಾಗ್ಗೆ ಬದಲಾಗುತ್ತಲೇ ಇರುವ ಸ್ಥಿತಿಯ ಬಗ್ಗೆ ಸರಕಾರ ಅಥವಾ ಆರ್‌ಬಿಐನಿಂದ ಇತ್ತೀಚಿನ ಮಾಹಿತಿಗಳ ಕೊರತೆ ಇನ್ನಷ್ಟು ಅಧ್ವಾನಕ್ಕೆ ಕಾರಣವಾಗಿದೆ. ಹೀಗಾಗಿಯೇ ನೋಟು ನಿಷೇಧವಾಗಿ 22 ದಿನಗಳು ಕಳೆದರೂ ನಿಜಕ್ಕೂ ಪ್ರಸಕ್ತ ಪರಿಸ್ಥಿತಿ ಏನು ಎಂಬ ಬಗ್ಗೆ ಸಾರ್ವಜನಿಕರಿಗೆ ಯಾವದೇ ಸುಳಿವು ಇಲ್ಲದೆ ಕಂಗಾಲಾಗಿದ್ದಾರೆ.







