ಡಯಾಲಿಸಿಸ್ ರೋಗಿಗಳಿಗೆ ವಾಹನ ಸೌಲಭ್ಯ
ನಾರಾಯಣ ಹೃದಯಾಲಯದಿಂದ ನೂತನ ವ್ಯವಸ್ಥೆ
ಶಿವಮೊಗ್ಗ, ಡಿ.1: ಇಲ್ಲಿನ ಸಹ್ಯಾದ್ರಿ ನಾರಾಯಣ ಹೃದಯಾಲಯ ವು ಡಯಾಲಿಸಿಸ್ ಅಗತ್ಯವಿರುವ ರೋಗಿಗಳಿಗೆ ಮನೆಬಾಗಿಲಿಗೆ ಉಚಿತ ವಾಹನ ಸೌಲಭ್ಯದ ವ್ಯವಸ್ಥೆ ಕಲ್ಪಿಸಿದೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಆಸ್ಪತ್ರೆಯ ಫೆೆಸಿಲಿಟಿ ಡೈರೆಕ್ಟರ್ ಪ್ರಶಾಂತ್ ದೇಸಾಯಿ, ರೋಗಿಗಳು ಈ ಸಾರಿಗೆ ವ್ಯವಸ್ಥೆಗಾಗಿ ಸಹಾಯವಾಣಿ 78290 47096ಗೆ ಕರೆ ಮಾಡುವ ಮೂಲಕ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.
ಪ್ರತೀ ಸೋಮವಾರದಿಂದ ಶನಿವಾರದವರೆಗೆ ಈ ಸೌಲಭ್ಯ ಇರುತ್ತದೆ. ದೂರದ ಊರುಗಳಿಂದ ಬರುವವರು ರೈಲು ನಿಲ್ದಾಣ ಅಥವಾ ಬಸ್ ನಿಲ್ದಾಣದಲ್ಲಿಳಿದ ನಂತರ ಸಹಾಯವಾಣಿಗೆ ಕರೆ ಮಾಡಿ ತಾವಿದ್ದ ಸ್ಥಳಕ್ಕೆ ವಾಹನ ತರಿಸಿಕೊಳ್ಳಬಹುದು.
ಚಿಕಿತ್ಸೆ ನಂತರ ಅವರನ್ನು ಮರಳಿ ನಿಲ್ದಾಣಕ್ಕೆ ಬಿಡಲಾಗುವುದು. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ಮಂಗಳೂರು, ಹಾವೇರಿ, ದಾವಣಗೆರೆ, ಚಿತ್ರದುರ್ಗದಿಂದ ಬರುವವರು ಇದರ ಸೌಲಭ್ಯ ಪಡೆಯಬಹುದೆಂದು ವಿವರಿಸಿದರು.
ಕಿಡ್ನಿ ವೈಫಲ್ಯ ಇರುವವರಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡಿಸಬೇಕಾಗುತ್ತದೆ. ಡಯಾಲಿಸಿಸ್ ಮಾಡಿಸಿಕೊಳ್ಳಲು ಬರುವವರಿಗೆ ವಾಹನ ಸಂಪರ್ಕದ ಕೊರತೆ ಇರುತ್ತದೆ. ಎಷ್ಟೋ ಬಾರಿ ಅಧಿಕ ಮೊತ್ತ ತೆತ್ತು ಆಟೊದ ಮೂಲಕ ಬರಬೇಕಾಗುತ್ತದೆ. ಇದನ್ನು ಗಮನಿಸಿ ಅಸ್ಪತ್ರೆ ಈ ವ್ಯವಸ್ಥೆ ಕಲ್ಪಿಸಿದೆ ಎಂದ ಅವರು, ನಗರದೊಳಗಿನ ರೋಗಿಗಳು ಮನೆಬಾಗಿಲಿನಿಂದ ಈ ಸೇವೆ ಪಡೆಯಬಹುದು ಎಂದು ವಿವರಿಸಿದರು.
ಆಸ್ಪತ್ರೆಯು ಈ ರೋಗಿಗಳಿಗೆಂದೇ ವಾಹನಗಳನ್ನು ಮೀಸಲಿರಿಸಿದೆ. ಸಹಾಯವಾಣಿಗೆ ಕರೆ ಮಾಡಿ ತಾವಿದ್ದ ಸ್ಥಳದ ವಿವರ ನೀಡಿದಾಕ್ಷಣ ಚಾಲಕರು ಅಲ್ಲಿಗೆ ವಾಹನ ತೆಗೆದುಕೊಂಡು ಬರುತ್ತಾರೆ. ಇಂತಹ ವ್ಯವಸ್ಥೆಯನ್ನು ಕಲ್ಪಿಸುತ್ತಿರುವ ಮೊಟ್ಟ ಮೊದಲ ಆಸ್ಪತ್ರೆ ಇದಾಗಿದೆ. ರೋಗಿಗಳು ಖರ್ಚಿಲ್ಲದೆ ಆಸ್ಪತ್ರೆಗೆ ಬಂದು ಹೋಗಬಹುದಾಗಿದೆ. ಇದೇ ರೀತಿ ನಾರಾಯಣ ಹೃದಯಾಲಯಕ್ಕೆ ಬರುವ ಇತರ ರೋಗಿಗಳಿಗೂ ಬಸ್ ನಿಲ್ದಾಣದಿಂದ ವ್ಯವಸ್ಥೆಯನ್ನು ಕೆಲವು ವರ್ಷಗಳಿಂದ ಮಾಡಲಾಗಿದೆ ಎನ್ನುವುದನ್ನು ಅವರು ನೆನಪಿಸಿದರು.
ಗೋಷ್ಠಿಯಲ್ಲಿ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಜಾಸಿಂಗ್, ಡಯಾಲಿಸಿಸ್ ತಜ್ಞ ಡಾ. ಕೆ.ಜಿ. ಅರುಣ್ ಉಪಸ್ಥಿತರಿದ್ದರು.







