ಬಿಡಬ್ಲುಎಫ್ ರ್ಯಾಂಕಿಂಗ್: ಏಳನೆ ಸ್ಥಾನಕ್ಕೆ ಸಿಂಧು

ಹೊಸದಿಲ್ಲಿ, ಡಿ.1: ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಗುರುವಾರ ಬಿಡುಗಡೆಯಾದ ವರ್ಲ್ಡ್ ಬ್ಯಾಡ್ಮಿಂಟನ್ ಫೆಡರೇಶನ್‌ನ(ಬಿಡಬ್ಲುಎಫ್) ಮಹಿಳೆಯರ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಏಳನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
ಚೀನಾ ಓಪನ್‌ನಲ್ಲಿ ಚೊಚ್ಚಲ ಸೂಪರ್ ಸರಣಿ ಜಯಿಸಿದ್ದ ಸಿಂಧು ಹಾಂಕಾಂಗ್ ಓಪನ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. ಈ ಎರಡು ಟೂರ್ನಿಯಲ್ಲಿ ನೀಡಿರುವ ಉತ್ತಮ ಪ್ರದರ್ಶನವನ್ನು ಆಧರಿಸಿ ರ್ಯಾಂಕಿಂಗ್‌ನಲ್ಲಿ 2 ಸ್ಥಾನ ಭಡ್ತಿ ಪಡೆದು 7ನೆ ಸ್ಥಾನ ತಲುಪಿದ್ದಾರೆ. ಈಗ ನಡೆಯುತ್ತಿರುವ ಮಕಾವು ಓಪನ್‌ನಿಂದ ಹೊರಗುಳಿದಿರುವ ಸಿಂಧು ಡಿ.14 ರಿಂದ 18ರ ತನಕ ದುಬೈನಲ್ಲಿ ನಡೆಯಲಿರುವ ಬಿಡಬ್ಲು ಎಫ್ ಸೂಪರ್ ಸರಣಿಯ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಲಂಡನ್ ಒಲಿಂಪಿಯನ್ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ-10ಕ್ಕೆ ವಾಪಸಾಗಿದ್ದಾರೆ. ಹೈದರಾಬಾದ್ ಆಟಗಾರ್ತಿ ಒಂದು ಸ್ಥಾನ ಭಡ್ತಿ ಪಡೆದು 10ನೆ ಸ್ಥಾನ ತಲುಪಿದ್ದಾರೆ.
ಹಾಂಕಾಂಗ್ ಓಪನ್ ಪ್ರಶಸ್ತಿ ಜಯಿಸಿರುವ ಚೈನೀಸ್ ತೈಪೆಯ ಟೈ ಝು ಯಿಂಗ್ ಮೊದಲ ಸ್ಥಾನ ಪಡೆದಿದ್ದಾರೆ. ಸ್ಪೇನ್‌ನ ಕ್ಯಾರೊಲಿನ ಮರಿನ್ ಎರಡನೆ ಸ್ಥಾನಕ್ಕೆ ಕುಸಿದಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಹಾಂಕಾಂಗ್ ಓಪನ್‌ನಲ್ಲಿ ರನ್ನರ್ ಅಪ್ ಆಗಿರುವ ಭಾರತದ ಶಟ್ಲರ್ ಸಮೀರ್ ವರ್ಮ 13 ಸ್ಥಾನ ಭಡ್ತಿ ಪಡೆದು 30ನೆ ಸ್ಥಾನ ತಲುಪಿದರು.







